‘ನೀವು ನಾಮ್ ​ದಾರ್​, ನಾನು ಕಾಮ್ ​ದಾರ್, ಹಾಗಾಗಿ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ: ಪ್ರಧಾನಿ ಮೋದಿ ಅವಿಶ್ವಾಸ ನಿರ್ಣಯ ವೇಳೆ ರಾಹುಲ್ ಗಾಂಧಿ ಟೀಕೆಗೆ ತಿರುಗೇಟು ನೀಡಿದ ಪ್ರಧಾನಿ ಮೋದಿ

ನವದೆಹಲಿ: ರಾಹುಲ್ ಗಾಂಧಿ ಅವರ ಕಣ್ಣಲ್ಲಿ ಕಣ್ಣಿಟ್ಟು ನಾನು ನೋಡಿಲ್ಲ. ಅದಕ್ಕಿಂತಲೂ ಮುಖ್ಯವಾದ ಕೆಲಸ ನನಗೆದೆ. ನೀವು ನಾಮ್​ದಾರ್​, ನಾನು ಕಾಮ್​ದಾರ್ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.
ಲೋಕಸಭೆಯಲ್ಲಿ ನಡೆದ ಅವಿಶ್ವಾಸ ನಿರ್ಣಯ ಕಲಾಪ ಹಲವು ಹೈ ಡ್ರಾಮಾಗಳಿಗೆ ಸಾಕ್ಷಿಯಾಗಿತ್ತು, ತಮ್ಮ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸುತ್ತಾ, ಪ್ರಧಾನಿ ನರೇಂದ್ರ ಮೋದಿ ಸದನದಲ್ಲಿ ಮಾತನಾಡಿದರು.
ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ ಧೈರ್ಯ, ಸಾಹಸ ನನಗೆ ಇಲ್ಲ ಎಂದು ಬೆಳಗ್ಗೆಯಷ್ಟೇ ಹೇಳಿದಿರಿ. ಹೌದು ನಾನು ಆ ರೀತಿ ನೋಡುವುದಿಲ್ಲ. ಏಕೆಂದರೆ ನೀವು ನಾಮ್ ​ದಾರ್​, ನಾನು ಕಾಮ್​ ದಾರ್.  ಅಂತೆಯೇ ಇಡೀ ದೇಶ ಇಂದು ನಿಮ್ಮ ಕಣ್ಣುಗಳನ್ನು ನೋಡಿದೆ. ಪ್ರತಿಯೊಬ್ಬರ ದೃಷ್ಟಿಯಲ್ಲೂ ಅದು ಸ್ಪಷ್ಟವಾಗಿದೆ. ಇಡೀ ದೇಶ ಟಿವಿಯಲ್ಲಿ ನಿಮ್ಮ ಕಣ್ಣಾಟವನ್ನು ಕಂಡಿದೆ. ಕಣ್ಣುಗಳನ್ನು ಹೇಗೆ ತೆರೆಯುವುದು-ಹೇಗೆ ಮುಚ್ಚುವುದು ಎಂಬುದನ್ನು ಜನ ನೋಡಿದ್ದಾರೆ ಬಿಡಿ. ನಿಮ್ಮ ಕಣ್ಣಲ್ಲಿ ಕಣ್ಣಿಟ್ಟ, ನಿಮ್ಮ ಜೊತೆ ಕೈಜೋಡಿಸಿದ ಚರಣ್​ ಸಿಂಗ್​ ಜೀ, ಚಂದ್ರಶೇಖರ್​ ಜೀ, ದೇವೇಗೌಡ ಜೀ, ಗುಜ್ರಾಲ್​ ಜೀ ಅವರುಗಳಿಗೆ ನೀವು ಏನು ಮಾಡಿದಿರಿ? ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಅಂತಹುದರಲ್ಲಿ ನಾನು ಹೇಗೆ ತಾನೆ ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಲಿ? ಎಂದು ರಾಹುಲ್​ ಗಾಂಧಿ ಕಣ್ಣು ಮಿಟುಕಿಸುವುದನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದರು.
ಇದೇ ವೇಳೆ ರಾಹುಲ್ ಗಾಂಧಿ ಅವರ ಭಾಗಿದಾರ್, ಜುಮ್ಲಾ ಸ್ಟ್ರೈಕ್, ಚೌಕಿದಾರ್ ಟೀಕಿಗಳಿಗೂ ಉತ್ತರ ನೀಡಿದ ಪ್ರಧಾನಿ ಮೋದಿ, ಹೌದು ನಾನು ದೇಶದ ಅಭಿವೃದ್ಧಿಯಲ್ಲಿ ಭಾಗಿದಾರ, ಆದರೆ ನಿಮ್ಮಂತೆ ಥೆಕೆದಾರ್ (ಮಧ್ಯವರ್ತಿ) ಅಲ್ಲ. ಸದನದಲ್ಲಿ ಮಕ್ಕಳಂತೆ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಗಂಭೀರ ವಿಚಾರಗಳಲ್ಲಿ ಇಂತಹ ಅಸಂಬಂದ್ಧ ಹೇಳಿಕೆಗಳನ್ನು ನೀಡುವ ಮೂಲಕ ರಾಹುಲ್ ಗಾಂಧಿ ತಾವಿನ್ನೂ ಅಪ್ರಬುದ್ಧರು ಎಂದು ಮತ್ತೆ ಸಾಬೀತು ಮಾಡಿದ್ದಾರೆ. ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದದಂತಹ ವಿಚಾರಗಳಲ್ಲಿ ರಾಹುಲ್ ನೀಡಿರುವ ಹೇಳಿಕೆ ತೀರಾ ನಗೆ ತರಿಸುತ್ತದೆ, ಅವರದೇ ಸರ್ಕಾರದ ರಕ್ಷಣಾ ಸಚಿವರು ಒಪ್ಪಂದಕ್ಕೆ ಸಹಿ ಹಾಕಿರುವ ದಾಖಲೆಗಳಿವೆ ಎಂದು ಮೋದಿ ಹೇಳಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ