ಪಿಎಚ್‍ಸಿ ಮೇಲ್ದರ್ಜೆಗೆ ಆರೋಗ್ಯ ಸೇವೆ ದ್ವಿಗುಣ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯಂತೆ ಪ್ರಾಥಮಿಕ ಆರೋಗ್ಯ ಕೇಂದ್ರ(ಪಿಎಚ್‍ಸಿ)ಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಮಾದರಿಯ ಆರೋಗ್ಯ ಸೇವೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಸಾರ್ವಜನಿಕ ಆರೋಗ್ಯ ಸೇವೆಯ ಸುಲಭ ಲಭ್ಯತೆ ಹಾಗೂ ಸರ್ವರಿಗೂ ಕೈಗೆಟುಕುವ ದರದ ಸೇವೆಯನ್ನು ಒದಗಿಸಲು ಈ ಕ್ರಮ ಕೈಗೊಂಡಿದ್ದು, ಸರ್ಕಾರದ 20 ಅಂಶಗಳ ಕಾರ್ಯಕ್ರಮಗಳಲ್ಲಿ ಇದೂ ಒಂದೆನಿಸಿದೆ.
ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾತ್ಯಕ್ಷಿಕೆ ವೀಕ್ಷಣೆ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಸರ್ಕಾರವು ಪ್ರಸ್ತುತ 15 ಆಸ್ಪತ್ರೆಗಳು, 18 ಇತರೆ ಆಸ್ಪತ್ರೆಗಳು, 207 ಸಮುದಾಯ ಆರೋಗ್ಯ ಕೇಂದ್ರಗಳು, 2359 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 8871 ಉಪಕೇಂದ್ರಗಳು ಮತ್ತು 146 ತಾಲ್ಲೂಕು ಆಸ್ಪತ್ರೆಗಳ ಮೂಲಕ ಆರೋಗ್ಯ ಸೌಲಭ್ಯವನ್ನು ಒದಗಿಸುತ್ತಿದೆ. ಜನ ಸಮುದಾಯಕ್ಕೆ ಸಾರ್ವಜನಿಕ ಆರೋಗ್ಯ ಸೌಲಭ್ಯಗಳನ್ನು ನೀಡುವಲ್ಲಿ ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಸೇವೆಯನ್ನು ಹಾಗೂ ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 24/7 ಸೇವೆಯನ್ನು ಒದಗಿಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸಬೇಕಾಗಿದೆ. ಈ ಸೇವೆಯನ್ನು ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ವಿಸ್ತರಿಸುವುದು ಸರ್ಕಾರದ ಗುರಿ ಎಂದು ಹೇಳಿದರು.
ಇ-ಆಸ್ಪತ್ರೆ, ಆಂಬ್ಯುಲೆನ್ಸ್ ಸೇವೆ:
ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾತನಾಡಿ, ಪ್ರತಿ ಕನ್ನಡಿಗನಿಗೆ ಉಚಿತ ಮತ್ತು ಗುಣಮಟ್ಟದ ವೈದ್ಯಕೀಯ ಸೇವೆ ಸಿಗಬೇಕು. ಇದಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ 2,380 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು 30,000 ಜನಸಂಖ್ಯೆಗೆ ಒಂದು ಪಿಎಚ್‍ಸಿ ಇದೆ. ಈ ಅಸಮತೋಲನ ಸರಿಪಡಿಸಲು ಅಸ್ತಿತ್ವದಲ್ಲಿರುವ ಪಿಎಚ್‍ಸಿಗಳನ್ನು ಮೇಲ್ದರ್ಜೆಗೇರಿಸುವುದು ಕಾರ್ಯಕ್ರಮದ ಉದ್ದೇಶ. ಪ್ರಸ್ತುತ 6 ಹಾಸಿಗೆಗಳಿರುವ ಪಿಎಚ್‍ಸಿಯ ಸಾಮಥ್ರ್ಯವನ್ನು 12 ರಿಂದ 20 ಹಾಸಿಗೆಗೆ ಏರಿಸಲಾಗುತ್ತದೆ. ಒಬ್ಬ ವೈದ್ಯರಿರುವ ಜಾಗದಲ್ಲಿ ಹೆಚ್ಚುವರಿಯಾಗಿ ಮಹಿಳಾ ವೈದ್ಯೆ ಹಾಗೂ ಆಯುಷ್ ವೈದ್ಯರನ್ನು ನಿಯುಕ್ತಿಗೊಳಿಸಲಾಗುತ್ತದೆ.
ಒಂದೇ ಸಮುಚ್ಛಯದಲ್ಲಿ ಶುಶ್ರೂಷಕರು, ವೈದ್ಯರು, ಸಿಬ್ಬಂದಿಗೆ ವಸತಿ ಕಲ್ಪಿಸಲಾಗುತ್ತದೆ. ಎರಡು ಎಕರೆ ಪ್ರದೇಶದಲ್ಲಿ 8 ಕೋಟಿ ರೂ. ಖರ್ಚು ಮಾಡಿ ಮಾದರಿ ಪಿಎಚ್‍ಸಿಗಳನ್ನು ನಿರ್ಮಿಸಲಾಗುತ್ತದೆ. ಅಂತರ್ಜಾಲ ಬಳಸಿ ಸಂಪರ್ಕ ಕಲ್ಪಿಸುವ ಇ-ಆಸ್ಪತ್ರೆ ಸೌಲಭ್ಯ ನೀಡಲಾಗುತ್ತದೆ. ಅಗತ್ಯ ತಜ್ಞರು, ತಂತ್ರಜರನ್ನೂ ನೇಮಿಸಲಾಗುತ್ತದೆ. 80,000 ಜನಸಂಖ್ಯೆಗೆ ಒಂದರಂತೆ ಇರುವ ಸಮುದಾಯ ಆರೋಗ್ಯ ಕೇಂದ್ರಗಳನ್ನು ಸಹ ಉನ್ನತೀಕರಿಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ