ಮುಂಬೈ: ಆರ್ ಬಿಐ ಮತ್ತು ಕೇಂದ್ರ ಸರ್ಕಾರದ ನಡುವಿನ ಕಲಹಕ್ಕೆ ಕೊನೆಗೂ ತೆರೆ ಬಿದ್ದಿದೆ. ಕೇಂದ್ರಕ್ಕೆ ಶೇ.50ರಷ್ಟು ಲಾಭಾಂಶ ವರ್ಗಾವಣೆಯೂ ಸೇರಿದಂತೆ ಸರ್ಕಾರದ ಬಹುತೇಕ ಬೇಡಿಕೆಗಳಿಗೆ ಆರ್ ಬಿಐ ಒಪ್ಪಿಗೆ ನೀಡುವ ಮೂಲಕ ಕಳೆದ ಹಲವು ದಿನಗಳಿಂದ ಆರಂಭವಾಗಿದ್ದ ಜಟಾಪಟಿಗೆ ಅಂತ್ಯಹಾಡಲಾಗಿದೆ
ಮುಂಬೈನಲ್ಲಿ ನಡೆದ ಆರ್ಬಿಐ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದ್ದು, ಸರ್ಕಾರದ ಬಹುತೇಕ ಬೇಡಿಕೆಗೆ ಸಭೆ ಸಮ್ಮತಿ ಸೂಚಿಸಿದೆ. ಈ ಮೂಲಕ ಸುಮಾರು 3 ತಿಂಗಳಿನಿಂದ ನಡೆಯುತ್ತಿದ್ದ ಶೀತಲಸಮರಕ್ಕೆ ತಾತ್ಕಾಲಿಕ ತೆರೆ ಬಿದ್ದಂತಾಗಿದೆ.
ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆ (ಎಂಎಸ್ಎಂಇ) ವಲಯದ ಸಾಲ ಮರುಸಂಯೋಜನೆ, ಆರ್ ಬಿಐನಲ್ಲಿರುವ ಹೆಚ್ಚುವರಿ ಹಣದ ವರ್ಗಾವಣೆ ಕುರಿತು ನಿಯಮ ರಚನೆಗೆ ಸಮಿತಿ, ಮಾರುಕಟ್ಟೆಗೆ ಹೆಚ್ಚುವರಿ ಹಣ ಪೂರೈಕೆ ಸೇರಿ ಹಲವು ಪ್ರಮುಖ ನಿರ್ಧಾರಗಳು ಹೊರಬಿದ್ದಿವೆ. ಸುಧೀರ್ಘ 9 ಗಂಟೆಗಳ ಕಾಲ ಈ ಮಹತ್ವದ ಸಭೆ ನಡೆದಿದ್ದು, ಡಿ.14ರಂದು ನಡೆಯಲಿರುವ ಮುಂದಿನ ಸಭೆಯೊಳಗೆ ವಿವಾದಿತ ವಿಚಾರಗಳಿಗೆ ತಾರ್ಕಿಕ ಅಂತ್ಯ ಹಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಇನ್ನು ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆ ವದಂತಿಗೂ ತೆರೆ ಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ಹಿನ್ನೆಲೆಯಲ್ಲಿ ಊರ್ಜಿತ್ ಪಟೇಲ್ ತಮ್ಮ ನಿಲುವನ್ನು ಸಡಿಲಿಸಿದ್ದಾರೆ ಎನ್ನಲಾಗಿದೆ.
RBI, board meet ends, bank to set up panels to look into issues that caused rift with govt