ರದ್ದುಗೊಂಡಿದ್ದ ನೋಟುಗಳ ಪೈಕಿ ಶೇ.99.3 ರಷ್ಟು ವಾಪಸ್ ಬಂದಿದೆ: ಆರ್ ಬಿಐ

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2017-18 ರ ವಾರ್ಷಿಕ ವರದಿ ಪ್ರಕಟಿಸಿದ್ದು, ನಿಷೇಧಗೊಂಡಿದ್ದ 500, 1000 ರೂಪಾಯಿ ನೋಟುಗಳ ಪೈಕಿ ಶೇ.99.3 ರಷ್ಟು ನೋಟುಗಳು ವಾಪಸ್ ಬಂದಿವೆ ಎಂದು ಹೇಳಿದೆ.
ನಿಷೇಧಗೊಂಡಿರುವ 500, 1000 ರೂಪಾಯಿ ನೋಟುಗಳ ಸಂಸ್ಕರಣೆ ರಿಸರ್ವ್ ಬ್ಯಾಂಕ್ ನ ಎಲ್ಲಾ ಕೇಂದ್ರಗಳಲ್ಲಿಯೂ ಬಹುತೇಕ ಪೂರ್ಣಗೊಂಡಿದ್ದು, ಚಲಾವಣೆಯಲ್ಲಿದ್ದ 15,310.73 ಬಿಲಿಯನ್ ನಷ್ಟು  ಎಸ್ ಬಿಎನ್(ಸ್ಪೆಸಿಫೈಡ್ ಬ್ಯಾಂಕ್ ನೋಟ್ಸ್) ವಾಪಸ್ ಬಂದಿದೆ ಎಂದು ವರದಿಯಲ್ಲಿ ಆರ್ ಬಿಐ ತಿಳಿಸಿದೆ.
2016 ರ ನವೆಂಬರ್ 8 ರ (ನೋಟು ನಿಷೇಧಗೊಂಡ ದಿನ)ದಿನದ ವರೆಗೆ ಒಟ್ಟು 15,417.93 ಬಿಲಿಯನ್ ನಷ್ಟು ಮೊತ್ತ  ಚಲಾವಣೆಯಲ್ಲಿತ್ತು. ಈಗ 15,310.73 ಬಿಲಿಯನ್ ನಷ್ಟು ಎಸ್ ಬಿಎನ್ ವಾಪಸ್ ಬಂದಿದೆ ಎಂದು ಆರ್ ಬಿಐ ಹೇಳಿದೆ. ಇದೇ ವೇಳೆ ಜಿಎಸ್ ಟಿ ಬಗ್ಗೆಯೂ ಆರ್ ಬಿಐ ಉಲ್ಲೇಖಿಸಿದ್ದು, ಜಿಎಸ್ ಟಿ ಜಾರಿ ದೇಶದ ತೆರಿಗೆ ಪದ್ಧತಿಯಲ್ಲಿ ಮಹತ್ತರ ಮೈಲಿಗಲ್ಲಾಗಿದ್ದು, ಅತ್ಯಂತ ಸಮರ್ಥ ತೆರಿಗೆ ಪದ್ಧತಿಯಾಗಿದೆ ಎಂದು ಆರ್ ಬಿಐ ಹೇಳಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ