ರಾಯಪುರ : ಛತ್ತೀಸ್ಗಢ ವಿಧಾನಸಭೆಗೆ ಮೊದಲ ಹಂತದ ಮತದಾನ ಆರಂಭವಾಗಿದ್ದು, 18 ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಮತದಾನ ಮಂದಗತಿಯಲ್ಲಿ ಸಾಗಿದ್ದು, ಮೊದಲ ಒಂದು ಗಂಟೆ ಅವಧಿಯಲ್ಲಿ ಶೇ.14ರಷ್ಟು ಮತದಾನವಾಗಿದೆ.
ಬಸ್ತಾರ್ ವಿಭಾಗದ 9 ಸ್ಥಾನಗಳು ಮತ್ತು ರಾಜನಂದಗಾಂವ್ ಜಿಲ್ಲೆಯ ಒಂದು ಸೀಟಿಗೆ ಮತ್ತು ಇತರೆಡೆಗಳ 8 ಸ್ಥಾನಗಳಿಗೆ ಮತದಾನ ಆರಂಭವಾಗಿದ್ದು, ಮುಂಜಾನೆ 7ಗಂಟೆಯಿಂದ ಚುನಾವಣೆ ನಡೆಯುತ್ತಿದೆ. ಮೊದಲ ಹಂತದಲ್ಲಿ 31.79 ಲಕ್ಷ ಮತದಾರರು ಇದ್ದು, 4336 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನಕ್ಸಲ್ ದಾಳಿ ಭೀತಿ ಹಿನ್ನೆಲೆಯಲ್ಲಿ ಚುನಾವಣಾ ಸಿಬ್ಬಂದಿಯನ್ನು ಹೆಲಿಕಾಪ್ಟರ್ ಗಳ ಮೂಲಕ ರವಾನೆ ಮಾಡಲಾಗಿದೆ.
ಈ ನಡುವೆ ತಾಂತ್ರಿಕ ಅಡಚಣೆಗಳಿಂದಾಗಿ ನಿಷ್ಕ್ರಿಯವಾಗಿದ್ದ ಸುಮಾರು 31 ಇವಿಎಂ ಗಳು ಮತ್ತು 61 ವಿವಿಪ್ಯಾಟ್ ಉಪಕರಣಗಳನ್ನು ಬದಲಾಯಿಸಲಾಯಿತು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಮತದಾನ ಆರಂಭವಾದ ಕೆಲವೇ ಹೊತ್ತಿನಲ್ಲಿ ನಕ್ಸಲರು ದಾಂತೇವಾಡ ಜಿಲ್ಲೆಯಲ್ಲಿ ಸುಧಾರಿತ ಸ್ಫೋಟಕ ಸಿಡಿಸುವ ಮೂಲಕ ಚುನಾವಣೆಯನ್ನು ಜನರು ಬಹಿಷ್ಕರಿಸಬೇಕೆಂದು ಕರೆ ನೀಡಿದ್ದಾರೆ.
ನಕ್ಸಲರ ದಾಳಿ ಭೀತಿ ಹೆಚ್ಚಿದ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಛತ್ತೀಸ್ಗಢದಲ್ಲಿ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಪೊಲೀಸರನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ.
Chhattisgarh, Assembly poll,Naxal attack, IED blast