ನಗರ ನಕ್ಸಲರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ: ಬಸ್ತಾರ್ ನಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಬಸ್ತಾರ್: ವಿದೇಶಗಳಲ್ಲಿ ವಿದ್ಯಾಭ್ಯಾಸ ಪಡೆದು, ಎಸಿ ರೂಂ ನಲ್ಲಿ ಕುಳಿತು, ಐಷಾರಾಮಿ ಕಾರುಗಳಲ್ಲಿ ಓಡಾಡುವ ನಗರ ನಕ್ಸಲರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದ್ದು, ದೇಶದ ವಿವಿಧ ಭಾಗಗಳಲ್ಲಿ ಶಾಂತಿ ಕದಡಲು ಯತ್ನಿಸುತ್ತಿರುವ ಇಂತವರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಛತ್ತೀಸ್ ಗಢದ ಬಸ್ತಾರ್ ಜಿಲ್ಲೆಯ ಜಗದಾಲ್ ಪುರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾದಿದ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಕ್ಪ್ರಹಾರ ನಡೆಸಿದರು. ಹವಾ ನಿಯಂತ್ರಿತ ಕೊಠಡಿಗಳಲ್ಲಿ ಕುಳಿತುಕೊಂಡು, ಮಕ್ಕಳನ್ನು ವಿದೇಶಗಳಲ್ಲಿ ಓದಿಸುತ್ತ, ಐಷಾರಾಮಿ ವಾಹನಗಳಲ್ಲಿ ಓಡಾದುತ್ತಾ ಇರುವ ನಗರ ನಕ್ಸಲರು ಇಂದು ಶಾಂತಿ ಕದಡುತ್ತಿದ್ದಾರೆ. ಇಲ್ಲಿನ ಬಸ್ತಾರ್ ಜಿಲ್ಲೆಅಯಲ್ಲಿಯೂ ನಗರ ನಕ್ಸಲರು ಶಾಂತಿ ಕದಡಲೆತ್ನಿಸಿದ್ದು, ರಿಮೋಟ್ ಕಂಟ್ರೋಲ್ ನಂತೆ ಕಾರ್ಯನಿರ್ವಹಿಸುತ್ತಾ, ಆದಿವಾಸಿಗಳ ಬದುಕು ನಿಯಂತ್ರಿಸಲು ಹೊರಟಿದ್ದಾರೆ. ಇವರಿಗೆ ಕಾಂಗ್ರೆಸ್ ನಾಯಕರು ಬೆಂಬಲ ನೀಡುತ್ತಿದ್ದಾರೆ ಎಂದರು.

ಇಲ್ಲಿನ ಜನರ ಬದುಕನ್ನು ಜಗತ್ತಿನ ಎದುರು ತೆರೆದಿಡಲೆಂದು ಬಂದಿದ್ದ ದೂರದರ್ಶನದ ಪತ್ರಕರ್ತನನ್ನು ನಕ್ಸಲರು ಹತ್ಯೆಗೈದರು. ಆ ವರದಿಗಾರ ಮಾಡಿದ್ದ ತಪ್ಪಾದರೂ ಏನು? ಆತ ಹೆಗಲ ಮೇಲೆ ಬಂದೂಕು ಹೊತ್ತು ಬಂದಿರಲಿಲ್ಲ. ಆತ ತಂದಿದ್ದುದು ಕ್ಯಾಮೆರಾ ಮಾತ್ರ. ನಿರಪರಾಧಿಗಳ ಹತ್ಯೆ ಮಾಡುವ ಮಾವೋವಾದಿಗಳನ್ನು ಕಾಂಗ್ರೆಸ್‌ ನಾಯಕರು ಅಮಾಯಕರು ಎನ್ನುತ್ತಾರೆ ಎಂದು ಗುಡುಗಿದರು.

ಒಬ್ಬ ನಿರ್ದೋಷಿ ಪತ್ರಕರ್ತನ ಹತ್ಯೆ ಮಾಡಿದವರನ್ನು ಕ್ರಾಂತಿಕಾರಿ ಎಂದು ಕರೆದರೆ ಈ ದೇಶದ ಜನರು ಕಾಂಗ್ರೆಸ್ ನಾಯಕರನ್ನು ಕ್ಷಮಿಸುವರೇ ಅದು ಎಂದಿಗೂ ಸಾಧ್ಯವಿಲ್ಲ ಎಂದರು.

ಶಾಂತಿಯ ದಾರಿಯಲ್ಲಿ ನಡೆಯುವುದು ಬಿಜೆಪಿ ಉದ್ದೇಶ. ಜನರ ಕನಸನ್ನು ನನಸು ಮಾಡುವುದೇ ನಮ್ಮ ಸಂಕಲ್ಪ. ಮತದಾರರೇ ಬನ್ನಿ ಹೊಸ ಬಸ್ತಾರ್ ಕಟ್ಟೋಣ, ಛತ್ತೀಸಗಡ ರಾಜ್ಯವನ್ನು ಸುಧಾರಣೆಯತ್ತ ಕೊಂಡೊಯ್ಯೋಣ ಎಂದು ಪ್ರಧಾನಿ ಕರೆ ನೀಡಿದರು.

ಬಸ್ತಾರ್‌ನಲ್ಲಿ ವಿಶ್ವವಿದ್ಯಾಲಯ ಆರಂಭವಾಗಬೇಕು. ಸುಕ್ಮಾ, ದಂತೇವಾಡ, ಬಿಜಾಪುರದಲ್ಲಿ ಅತ್ಯಾಧುನಿಕ ಸೌಲಭ್ಯಗಳು ಸಿಗುವಂತೆ ಆಗಬೇಕು. ದೇಶದಲ್ಲಿ ಇಷ್ಟು ವರ್ಷ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ ಸರ್ಕಾರಗಳು ಆದಿವಾಸಿಗಳ ಕಲ್ಯಾಣಕ್ಕಾಗಿ ಏನನ್ನೂ ಮಾಡಿಲ್ಲ. ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವ ಬಿಜೆಪಿ ಸರ್ಕಾರ ಮೊದಲ ಬಾರಿಗೆ ಆದಿವಾಸಿಗಳ ಕಲ್ಯಾಣಕ್ಕಾಗಿ ಪ್ರತ್ಯೇಕ ಇಲಾಖೆಯನ್ನೇ ರೂಪಿಸಿತು. ಪ್ರತ್ಯೇಕ ಸಚಿವರನ್ನು ನೇಮಿಸಿ ಬಜೆಟ್ ಮಂಡನೆ ಮಾಡಿದರು ಎಂದು ಹೇಳಿದರು.

ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದ ಕಾಂಗ್ರೆಸ್ ನಾಯಕರಿಗೆ ಆದಿವಾಸಿಗಳ ಸಮಸ್ಯೆ ಅರ್ಥವಾಗಲ್ಲ. ಆದಿವಾಸಿಗಳನ್ನು ಆಡಿಕೊಂಡು ನಗುವ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ದೇಶದ ಆದಿವಾಸಿಗಳಿಗೆ ಅವಮಾನವಾದಂತೆ ಎಂದು ಟೀಕಿಸಿದರು.

ಬಸ್ತಾರ್ ನಲ್ಲಿನ ಆದಿವಾಸಿಗಳ ಸಂಕಷ್ಟ ತಿಳಿದ್ದೇನೆ. ಈ ಕಾರಣದಿಂದಲೇ ನಾವು ಪರಿಸರ ಕಾಯ್ದೆಗಳಿಗೆ ಸೂಕ್ತ ತಿದ್ದುಪಡಿ ತಂದು ಆದಿವಾಸಿಗಳು ಅರಣ್ಯ ಉತ್ಪನ್ನ ಸಂಗ್ರಹಿಸಲು ಅನುಕೂಲ ಮಾಡಿಕೊಟ್ಟಿದ್ದೇವೆ. ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಇಂಥ ಬೆಳವಣಿಗೆಯನ್ನು ನಿರೀಕ್ಷಿಸಲೂ ಸಾಧ್ಯವಿರಲಿಲ್ಲ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಇದು ನಮ್ಮ ಮಂತ್ರ ಆದರೆ ಸುಳ್ಳು ಹೇಳುವುದೇ ಕಾಂಗ್ರೆಸ್ ನಾಯಕರ ಮಂತ್ರವಾಗಿದೆ ಎಂದು ಗುಡುಗಿದರು.

ಬಂದೂಕಿನ ರಸ್ತೆಯಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವವೇ ನಮ್ಮ ಸಮಸ್ಯೆಗಳಿಗೆ ಪರಿಹಾರ ಕೊಡಬಲ್ಲದು.ನ.12ರಂದು ಮತಗಟ್ಟೆಗೆ ಬಂದು ಎಲ್ಲರೂ ತಮ್ಮ ಹಕ್ಕು ಚಲಾಯಿಸಿ. ಬಿಜೆಪಿಗೆ ಮತನೀಡಿ ಎಂದು ಮನವಿ ಮಾಡಿದರು.

Chhattisgarh,Election, PM Modi,Bastar,Urban Naxals

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ