ಛತ್ತೀಸ್ ಘಡ ವಿಧಾನಸಭೆ ಚುನಾವಣೆ: ಬಿಗಿ ಭದ್ರತೆ ನಡುವೆ ಕೊನೆ ಹಂತದ ಮತದಾನ

ರಾಯ್ ಪುರ: ಛತ್ತೀಸ್ ಘಡ ವಿಧಾನಸಭೆ ಚುನಾವಣೆಯ ಕೊನೆ ಹಂತದ ಮತದಾನ ಆರಂಭಗೊಂಡಿದ್ದು, ನಕ್ಸಲ್ ದಾಳಿ ಭೀತಿ ಹಿನ್ನಲೆಯಲ್ಲಿ ಮತದಾನಕ್ಕೆ ಭಾರಿ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.

ಮತದಾನಕ್ಕಾಗಿ 19,336 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದೆ. ನಕ್ಸಲ್ ದಾಳಿ ಭೀತಿ ಹಿನ್ನಲೆಯಲ್ಲಿ ಭಾರಿ ಭದ್ರತೆ ಒದಗಿಸಲಾಗಿದ್ದು, ಸುಮಾರು ಒಂದು ಲಕ್ಷ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಬೆಳಿಗ್ಗೆ 10 ಗಂಟೆಯವರೆಗೆ ಶೇ.12.54 ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.

ನಕ್ಸಲ್‌ ಪೀಡಿತ ಜಿಲ್ಲೆಗಳಾದ ಗರಿದಾಬಾದ್‌, ಧಾಮ್ತರಿ, ಮಹಾಸಮುಂದ್, ಕಬಿರ್ಧಮ್‌, ಜಶ್ಪುರ ಮತ್ತು ಬಲ್ರಾಮ್ ಪುರ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತೆಯನ್ನು ಒದಗಿಸಲಾಗಿದ್ದು, ಇಲ್ಲಿ ನಕ್ಸಲ್ ನಿಗ್ರಹಪಡೆ, ಅರೆ ಸೇನಾ ಪಡೆ, ತುರ್ತು ಪ್ರಹಾರ ದಳಗಳು ಮತ್ತು ಸಿಆರ್ ಪಿಎಫ್ ಯೋಧರನ್ನು ನಿಯೋಜಿಸಲಾಗಿದೆ.

ಒಟ್ಟು 90 ವಿಧಾನಸಭಾ ಕ್ಷೇತ್ರಗಳ ಪೈಕಿ 72 ವಿಧಾನಸಭೆ ವ್ಯಾಪ್ತಿಯಲ್ಲಿ ಇಂದು ಮತದಾನ ನಡೆಯುತ್ತಿದ್ದು, ಒಟ್ಟು 1,079 ಅಭ್ಯರ್ಥಿಗಳ ಭವಿಷ್ಯ ಇಂದು ಮತಪೆಟ್ಟಿಗೆಯಲ್ಲಿ ಭದ್ರವಾಗಲಿದೆ. ಒಟ್ಟು 1.54 ಕೋಟಿ ಮತದಾರರ ಪೈಕಿ 77.53 ಲಕ್ಷ ಪುರುಷರು, 76.46 ಲಕ್ಷ ಮಹಿಳೆಯರು ಮತ್ತು 877 ಜನ ತೃತೀಯ ಲಿಂಗಿಗಳು ಇಂದು ಮತದಾನ ಮಾಡಲಿದ್ದಾರೆ.

ನವೆಂಬರ್‌ 12 ರಂದು ಬಸ್ತಾರ್‌ ಮತ್ತು ರಾಜ್ ನಂದ್ಗಾವ್‌ ಜಿಲ್ಲೆಗಳ 18 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಇಂದು ಎರಡನೇ ಹಾಗೂ ಕೊನೆ ಹಂತದ ಮತದಾನ ನಡೆಯುತ್ತಿದೆ.

Chhattisgarh, Assembly poll,voting

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ