ಕಾಂಗ್ರೆಸ್ ಜತೆ ಮೈತ್ರಿ ಪ್ರಮೇಯವೇ ಇಲ್ಲ: ಹೆಚ್ ಡಿ ದೇವೇಗೌಡ

ಬೆಂಗಳೂರು:ಮಾ-27: ಪ್ರಗತಿಪರ ಸಂಘಟನೆಯವರು ಬಂದು ಬಿಜೆಪಿ ಸೋಲಿಸಲು ಕಾಂಗ್ರೆಸ್ ನೊಂದಿಗೆ ಕೈ ಜೋಡಿಸಿ ಎಂದಿದ್ದರು. ಆದರೆ ಪ್ರಗತಿಪರರು ಹೇಳಿದ್ದನ್ನು ಮಾಡುವುದಕ್ಕೆ ಸಮಯವಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ನೊಂದಿಗಿನ ಜೆಡಿಎಸ್ ಮೈತ್ರಿ ವಿಚಾರವನ್ನು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ತಳ್ಳಿಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾವು ಮಾಯಾವತಿಯವರ ಬಿಎಸ್‌ಪಿ ಜತೆ ಕೈ ಜೋಡಿಸಿದ್ದೇವೆ. ಸಮಾಜವಾದಿ ಪಕ್ಷದವರು ಬಂದರೆ ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ. ಉಳಿದ ಪಕ್ಷಗಳ ಮೈತ್ರಿ ಪರಿಗಣಿಸಲು ಸಮಯ ಇಲ್ಲ ಎಂದರು.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆಗಿನ ಮೈತ್ರಿಯನ್ನು ಕೇವಲ ವ್ಯಂಗ್ಯವಾಗಿ ಹೇಳಿದ್ದಷ್ಟೆ. ಆದರೆ, ಈ ವಿಚಾರವನ್ನು ಬೇರೆ ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆ ಸಂಬಂಧ ಬೆಳೆಸುವ ಪ್ರಮೇಯವೇ ಬರುವುದಿಲ್ಲ. ಸಂಪೂರ್ಣ ಬಹುಮತದೊಂದಿಗೆ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ನಾಡಿನ ಜನತೆ ಕುಮಾರಸ್ವಾಮಿಯವರಿಗೆ ಅಶೀರ್ವದಿಸುತ್ತಾರೆಂಬ ವಿಶ್ವಾಸ ಇದೆ ಎಂದರು.

ಈಗಾಗಲೇ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಮೇ,15ರಂದು ಫಲಿತಾಂಶ ಪ್ರಕಟವಾಗಲಿದೆ. ಮೇ 18ರಂದು ನನ್ನ ಹುಟ್ಟುಹಬ್ಬ ಇದೆ. ನನ್ನ ಹುಟ್ಟುಹಬ್ಬವನ್ನು ನಾಡಿನ ಜನತೆಯೊಂದಿಗೆ ವಿಜೃಂಭಣೆಯಿಂದ ಆಚರಣೆಸಿಕೊಳ್ಳುತ್ತೇನೆ ಎಂದು ಜೆಡಿಎಸ್ ಜಯಭೇರಿಯಾಗಲಿದೆ ಎಂಬ ಭವಿಷ್ಯ ನುಡಿದಿದ್ದಾರೆ.

ಕಳೆದು ಮೂರ್ನಾಲ್ಕು ದಿನಗಳಿಂದ ಸ್ವೇಚ್ಛಾಚಾರವಾಗಿ ಅಧಿಕಾರಿಗಳ ವರ್ಗಾವಣೆ ಮಾಡಲಾಗುತ್ತಿದೆ. ಅಧಿಕಾರಿಗಳನ್ನು ಬೇಕಾಬಿಟ್ಟಿ ವರ್ಗಾವಣೆ ಮಾಡಿದ್ದಾರೆ. ಈ ವಿಷಯವನ್ನು ಚುನಾವಣೆ ಆಯೋಗದ ಗಮನಕ್ಕೆ ತರುತ್ತೇವೆ ಎಂದ ದೇವೇಗೌಡರು, ಮೂರು ವರ್ಷಕ್ಕಿಂತ ‌ಹೆಚ್ಚು‌ ಕಾಲ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಬೀಡು ಬಿಟ್ಟಿರುವ ಹಾಗೂ ಜನಪ್ರತಿನಿದಿಗಳ ಸಂಬಂಧಿಗಳಾಗಿರುವ ಅಧಿಕಾರಿಗಳನ್ನು ವರ್ಗ ಮಾಡಬೇಕು. ಮತಗಟ್ಟೆಗೆ ತಟಸ್ಥ ಅಧಿಕಾರಿಗಳನ್ನು ನೇಮಕ ಮಾಡಬೇಕು. ಅದನ್ನು ಬಿಟ್ಟು ರಾಜ್ಯ ಸರ್ಕಾರ ಮನಬಂದಂತೆ ವರ್ಗಾವಣೆ ಮಾಡಿದೆ ಎಂದು ಕಿಡಿಕಾರಿದರು.

ಇದೇವೇಳೆ ಕೆಂಪಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಗೌಡರು, ಚುನಾವಣೆಗೂ ಪೊಲೀಸ್ ವ್ಯವಸ್ಥೆ ಬದಲಾಗಬೇಕು. ೫ ವರ್ಷ ಹೇಗೋ ಕೆಂಪಯ್ಯ ವ್ಯವಸ್ಥೆ ನಡೆದುಕೊಂಡು ಹೋಯಿತು. ಇನ್ನು ಇದಕ್ಕೆ ಅವಕಾಶ ಬೇಡ. ಈ ಸಂಬಂಧ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.

assembly poll,H D Deve Gowda,no support with Congress

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ