ಮಗಳ ಸೀಮಂತಕ್ಕೆ ಬರಬೇಕಾಗಿದ್ದ ಕಲಬುರ್ಗಿಯ ಯೋಧ ನಕ್ಸಲರ ಗುಂಡೇಟಿಗೆ ಬಲಿ

ಕಲಬುರ್ಗಿನಕ್ಸಲರ ವಿರುದ್ಧದ ಕಾರ್ಯಾಚರಣೆ ವೇಳೆ ಕಲಬುರ್ಗಿ ಮೂಲದ ಯೋಧ ಹುತಾತ್ಮರಾಗಿದ್ದು, ಇಂದು ಸಂಜೆ ಕಮಲಾಪುರ ತಾಲೂಕಿನ ಮರಗುತ್ತಿ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಛತ್ತೀಸ್​ಗಢ ಬಿಜಾಪುರ ಜಿಲ್ಲೆಯ ಜಗದಲ್​ಪುರ ಬಳಿ ನಡೆದ ನಕ್ಸಲ್ ದಾಳಿಯಲ್ಲಿ ಸಿಆರ್​ಪಿಎಫ್​ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ಕಾರ್ಯಾಚರಣೆ ವೇಳೆ ಬಾಂಬ್​ ಸ್ಫೋಟಗೊಂಡು ಮೂವರು ಸಿಆರ್​ಪಿಎಫ್​ ಯೋಧರು ಹುತಾತ್ಮರಾಗಿದ್ದರು. ಅವರಲ್ಲಿ ಕರ್ನಾಟಕದ ಕಲಬುರ್ಗಿ ಮೂಲದ ಮಹದೇವ ಪಾಟೀಲ (50) ಕೂಡ ಒಬ್ಬರು.

ಕಳೆದ 29 ವರ್ಷಗಳಿಂದ ಸಿಆರ್​ಪಿಎಫ್​ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹದೇವ ಪಾಟೀಲ ತಮ್ಮ ಮಗಳ ಸೀಮಂತಕ್ಕೆಂದು ಇಂದು ಊರಿಗೆ ಬರುವವರಿದ್ದರು. ಆದರೆ, ನಿನ್ನೆ ನಡೆದ ನಕ್ಸಲ್​ ದಾಳಿಯಲ್ಲಿ ಅವರು ಸಾವನ್ನಪ್ಪಿರುವುದಕ್ಕೆ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ಇಂದು ಹೈದರಾಬಾದ್ ಮೂಲಕ ಮರಗುತ್ತಿ ಗ್ರಾಮಕ್ಕೆ ಪಾರ್ಥೀವ ಶರೀರ ರವಾನೆಯಾಗಲಿದೆ. ಇಂದು ಸಂಜೆ 3 ಗಂಟೆಗೆ ಗ್ರಾಮ ತಲುಪುವ ಸಾಧ್ಯತೆಯಿದ್ದು, ಗ್ರಾಮದ ಶಾಲೆ ಆವರಣ ಅಥವಾ ಹುತಾತ್ಮ ಯೋಧನ ಹೊಲದಲ್ಲಿ ಅಂತ್ಯಕ್ರಿಯೆ ನೆರವೇರಿಸುವ ಕುರಿತು ಅಧಿಕಾರಿಗಳ ಚರ್ಚೆ ನಡೆಸಿದ್ದಾರೆ.

ಛತ್ತೀಸ್​ಗಢದ ಕೇಶ್​ಕುಟುಲ್ ಗ್ರಾಮದ ಬಳಿ ನಿನ್ನೆ ನಕ್ಸಲರು ಅವಿತಿರುವ ಮಾಹಿತಿ ಪಡೆದ ಸಿಆರ್​ಪಿಎಫ್​ ಸಿಬ್ಬಂದಿ ಬೈಕ್​ನಲ್ಲಿ ಕಾರ್ಯಾಚರಣೆಗೆ ಹೊರಟಿದ್ದರು. ಆಗ ಏಕಾಏಕಿ ಗುಂಡಿನ ದಾಳಿ ನಡೆಸಿದ ನಕ್ಸಲರ ಮೇಲೆ ಯೋಧರೂ ಪ್ರತಿದಾಳಿ ನಡೆಸಿದರು. ಈ ವೇಳೆ ಮೂವರು ಯೋಧರು ಹುತಾತ್ಮರಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ