ರಾಯ್ ಪುರ: ಛತ್ತೀಸ್ ಗಡದಲ್ಲಿ ನಡೆದ ನಕ್ಸಲ್ ಅಟ್ಟಹಾಸಕ್ಕೆ ಸಂಬಂಧಿಸಿದಂತೆ ಹೇಳಿಕೆ ಬಿಡುಗಡೆ ಮಾಡಿರುವ ನಕ್ಸಲರು, ಮಾಧ್ಯಮಗಳ ಮೇಲೆ ದಾಳಿ ಮಾಡುವ ಉದ್ದೇಶ ತಮಗಿರಲಿಲ್ಲ ಎಂದು ಹೇಳಿದ್ದಾರೆ.
ಛತ್ತೀಸಗಢದ ದಾಂತೇವಾಡದಲ್ಲಿ ಅ.30ರಂದು ಚುನಾವಣಾ ವರದಿಗೆಂದು ತೆರಳಿದ್ದ ದೂರದರ್ಶನದ ವರದಿಗಾರ ಹಾಗೂ ಕ್ಯಾಮರಾ ಮೆನ್ ಮೇಲೆ ನಕ್ಸಲರು ದಾಳಿ ನಡೆಸಿದ್ದರು.
ದಾಳಿಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿದ್ದರು ಅಲ್ಲದೆ, ದೂರದರ್ಶನದ ಕ್ಯಾಮೆರಾಮೆನ್ ಅಚ್ಯುತಾನಂದನ್ ಸಾಹು ಎಂಬುವವರು ಮೃತಪಟ್ಟಿದ್ದರು.
ಈ ಘಟನೆ ಸಂಬಂಧ ನಕ್ಸಲರು ಎರಡು ಪುಟಗಳ ಹೇಳಿಕೆ ಬಿಡುಗಡೆ ಮಾಡಿದ್ದು, ಪ್ರತೀ ದಿನದಂತೆ ದಾಳಿ ನಡೆದ ದಿನ ಕೂಡ ನಮ್ಮ ಮೇಲೆ ದಾಳಿ ನಡೆಸಲು ಪೊಲೀಸರು ಯತ್ನ ನಡೆಸಿದ್ದರು. ತಂಡದಲ್ಲಿ ದೂರದರ್ಶನ ತಂಡ ಕೂಡ ಇರುತ್ತದೆ ಎಂಬುದು ನಮಗೆ ಗೊತ್ತಿರಲಿಲ್ಲ. ಹೀಗಾಗಿ ದಾಳಿಯಲ್ಲಿ ಅಚ್ಯುತಾನಂದ್ ಸಾಹು ಅವರು ಸಾವನ್ನಪ್ಪಿದ್ದಾರೆ. ಉದ್ದೇಶಪೂರ್ವಕವಾಗಿ ನಾವು ಎಂದಿಗೂ ಯಾವುದೇ ಪತ್ರಕರ್ತರನ್ನು ಹತ್ಯೆ ಮಾಡಿಲ್ಲ. ಪತ್ರಕರ್ತರು ಪೊಲೀಸರೊಂದಿಗೆ ಇರಬಾರದೆಂದು ನಾವು ಮನವಿ ಮಾಡಿಕೊಳ್ಳುತ್ತೇವೆ. ಪ್ರಮುಖವಾಗಿ ಚುನಾವಣೆ ಕರ್ತವ್ಯದ ವೇಳೆ ಜೊತೆಗಿರಬೇಡಿ ಎಂದು ತಿಳಿಸಿದ್ದಾರೆ.
ಅಲ್ಲದೇ ಪ್ರತೀನಿತ್ಯ ನಮ್ಮ ಗ್ರಾಮದ ಮೇಲೆ ದಾಳಿ ನಡೆಯುತ್ತಲೇ ಇರುತ್ತದೆ. ಸ್ಥಳೀಯರನ್ನು ಥಳಿಸಲಾಗುತ್ತಿರುತ್ತದೆ. ನಕಲಿ ಎನ್ ಕೌಂಟರ್ ಗಳಲ್ಲಿ ಜನರನ್ನು ಹತ್ಯೆ ಮಾಡುತ್ತಿರುತ್ತಾರೆ. ಜನರ ಮೇಲೆ ನಕಲಿ ಪ್ರಕರಣಗಳನ್ನು ದಾಖಲಿಸುತ್ತಾರೆ. ಕೆಲವರನ್ನು ಇಲ್ಲಸಲ್ಲದ ಆರೋಪದ ಮೇಲೆ ಬಂಧನಕ್ಕೊಳಪಡಿಸುತ್ತಾರೆ. ನಂತರ ಮಾಧ್ಯಮಗಳ ಮುಂದೆ ನಕ್ಸಲರು ಎಂದು ಹೇಳುತ್ತಾರೆ. ರಾಜಕೀಯ ಪಕ್ಷಗಳು ಮಾಧ್ಯಮಗಳನ್ನು ತಪ್ಪು ಹಾದಿಗೆಳೆಯುತ್ತಿವೆ ಎಂದು ಗುಡುಗಿದ್ದಾರೆ.
ನಕ್ಸಲರ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ದಂತೇವಾಡ ಪೊಲೀಸ್ ಅಧಿಕಾರಿ ಅಭಿಷೇಕ್ ಪಲ್ಲವ್ ಅವರು, ದಾಳಿ ನಡೆಯುವುದಕ್ಕೂ ಮುನ್ನ ಸಾಕ್ಷ್ಯಾಧಾರಗಳು ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗಿದ್ದವು. ಪತ್ರಕರ್ತರನ್ನು ಹತ್ಯೆ ಮಾಡುವ ಉದ್ದೇಶವಿಲ್ಲದಿದ್ದರೆ, ಕ್ಯಾಮೆರಾವನ್ನೇಕೆ ಹೊತ್ತೊಯ್ದರು? ಪತ್ರಕರ್ತನ ದೇಹದೊಳಗೆ ಹಲವು ಗುಂಡುಗಳು ಹೊಕ್ಕಿದ್ದವು. ತಲೆಗೆ ಗಂಭೀರವಾಗಿ ಗಾಯವಾಗಿತ್ತು. ಇದು ತಿಳಿಯದೇ ಅಲ್ಲ, ಉದ್ದೇಶಪೂರ್ವಕವಾಗಿಯೇ ನಕ್ಸಲರು ಪತ್ರಕರ್ತನನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
Chhattisgarh,Dantewada,Naxals attack,DD Journalist