ಕರುಣಾನಿಧಿ ಅಂತ್ಯಕ್ರಿಯೆ ಜಾಗ: ಹೈಕೋರ್ಟ್‌ ಮೆಟ್ಟಿಲೇರಿದ ಡಿಎಂಕೆ

ಚೆನ್ನೈ: ಕರುಣಾನಿಧಿ ಅಂತ್ಯಕ್ರಿಯೆಸಂಬಂಧ ಹೈಕೋರ್ಟ್‌ ಮೆಟ್ಟಿಲೇರಿರುವ ಡಿಎಂಕೆಯ ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ ರಾತ್ರಿ 10.30ಕ್ಕೆ ವಿಚಾರಣೆ ನಡೆಸಲಿದೆ.

ನಾಡಿನ ಹಿಂದುಳಿದ ವರ್ಗದ ಏಳಿಗೆಗಾಗಿ ಶ್ರಮಿಸಿದ ನಾಯಕನನ್ನು ಮರೀನಾ ಬೀಚ್‌ ಬಳಿಯ ಅಣ್ಣ ಮೆಮರಿಯಲ್‌ನಲ್ಲಿ ನಡೆಸಲು ಪುತ್ರ ಸ್ಟಾಲಿನ್‌ ಸರಕಾರಕ್ಕೆ ಮನವಿ ಸಲ್ಲಿಸಿದ್ದು, ಇದಕ್ಕೆ ಸರಕಾರ ಒಪ್ಪಿಗೆ ಸೂಚಿಸಿಲ್ಲ.

ಮಾಜಿ ಸಿಎಂ ಕಾಮರಾಜ್‌ ಅವರ ಸಮಾಧಿ ಇರುವ ಮರೀನಾ ಬೀಚ್‌ ಭಾಗದಲ್ಲಿ ಹಲವಾರು ಪ್ರಕರಣಗಳು ಮದ್ರಾಸ್‌ ಹೈಕೋರ್ಟ್‌ನಲ್ಲಿ ಇತ್ಯರ್ಥವಾಗಲು ಬಾಕಿ ಉಳಿದಿವೆ. ಈ ಭಾಗದಲ್ಲಿ ಗಣ್ಯರ ಸಮಾಧಿ ಮಾಡಬಾರದು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳೂ ಇತ್ಯರ್ಥವಾಗದೇ ಉಳಿದಿದೆ. ಹೀಗಾಗಿ ಮರೀನಾ ಬೀಚ್ ಬದಲಾಗಿ ಸರಕಾರ ಅಣ್ಣಾ ವಿಶ್ವವಿದ್ಯಾಲಯದ ಎದುರು ಭಾಗದಲ್ಲಿರುವ 2 ಎಕರೆ ಜಮೀನನ್ನು ಸಮಾಧಿಗಾಗಿ ನೀಡಲು ಸಿದ್ಧವಿದೆ ಎಂದು ಸರಕಾರ ತಿಳಿಸಿತ್ತು.

ಇದನ್ನು ವಿರೋಧಿಸಿ, ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು. ಅರ್ಜಿಯನ್ನು ತುರ್ತು ಪ್ರಕರಣ ಎಂದು ಪರಿಗಣಿಸಿ ತ್ವರಿತ ವಿಚಾರಣೆ ನಡೆಸಬೇಕು ಎಂದು ಕೋರ್ಟ್‌ಗೆ ಡಿಎಂಕೆ ಮನವಿ ಸಲ್ಲಿಸಿದೆ. ಇದಕ್ಕೆ ಒಪ್ಪಿರುವ ಕೋರ್ಟ್‌ ಮಂಗಳವಾರ ರಾತ್ರಿ 10.30ಕ್ಕೆ ಅರ್ಜಿ ವಿಚಾರಣೆ ನಡೆಸಲಿದೆ.

ಇದಕ್ಕೂ ಮುನ್ನ ಮರೀನಾ ಬೀಚ್‌ನಲ್ಲಿಯೇ ಅಂತ್ಯಕ್ರಿಯೆಗೆ ಅವಕಾಶ ಕಲ್ಪಿಸದ ತಮಿಳುನಾಡು ಸರಕಾರದ ವಿರುದ್ಧ ಡಿಎಂಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ವಿಧಿವಶರಾದ ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಅವರ ಅಂತ್ಯಕ್ರಿಯೆ ಬುಧವಾರ ನಡೆಯಲಿದೆ. ರಾತ್ರಿ 8.30ರ ಸುಮಾರಿಗೆ ಕರುಣಾನಿಧಿ ಮೃತದೇಹವನ್ನು ಆಸ್ಪತ್ರೆಯಿಂದ ರಾಜಾಜಿ ಹಾಲ್‌ಗೆ ರವಾನಿಸಲಾಗಿದ್ದು ಬುಧವಾರ ಸಂಜೆ ವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುತ್ತದೆ ಎಂದು ಮೂಲಗಳು ತಿಳಿಸಿವೆ.

ಅಗಲಿದ ನಾಯಕನ ಗೌರವಾರ್ಥ ಏಳು ದಿನ ಶೋಕಾಚರಣೆ ಆಚರಿಸಲು ಸರಕಾರ ಆದೇಶಿಸಿದೆ. ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಿ ಗೌರವ ಸೂಚಿಸಲಾಗಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲೂ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಿ ಗೌರವ ಸೂಚಿಸಲಾಗುತ್ತದೆ. ಕರ್ನಾಟದಲ್ಲಿ ಬುಧವಾರ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಸಕಲ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ.

ಅಂತ್ಯಕ್ರಿಯೆಯೆಯಲ್ಲಿ ರಾಷ್ಟ್ರದ ವಿವಿಧ ರಾಜಕೀಯ ನಾಯಕರು, ವಿವಿಧ ರಾಜ್ಯದ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ