ತಮಿಳುನಾಡು ಮಾಜಿ ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಇನ್ನಿಲ್ಲ

ಚೆನ್ನೈ: ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ನಿಧನರಾಗಿದ್ದಾರೆ.
ಕಳೆದ 10 ದಿನಗಳಿಂದ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ 94 ವರ್ಷದ ಕರುಣಾನಿಧಿ ಅವರ ಆರೋಗ್ಯ ಇಂದು ಮತ್ತಷ್ಟು ಕ್ಷೀಣಿಸಿತ್ತು. ಅಂಗಾಂಗಳ ಕಾರ್ಯನಿರ್ವಹಣೆಯೂ ಕ್ಷೀಣಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.
ಕರುಣಾನಿಧಿ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ನಡೆಸಿದ್ದರೂ ಅವರು ಅದಕ್ಕೆ ಸ್ಪಂದಿಸುವಲ್ಲಿ ವಿಫಲರಾದರು. ಸಂಜೆ 6.10ರ ಸಮಯಕ್ಕೆ ಅವರು ಕೊನೆಯುಸಿರೆಳೆದರು ಎಂದು ಆಸ್ಪತ್ರೆ ತಿಳಿಸಿದೆ.
ಕರುಣಾನಿಧಿ ಅವರು ಪತ್ನಿಯರಾದ ರಜತಿ ಅಮ್ಮಾಳ್, ದಯಾಳು ಅಮ್ಮಾಳ್, ಮಕ್ಕಳಾದ ಎಂ.ಕೆ. ಸ್ಟಾಲಿನ್, ಕನಿಮೊಳಿ, ಎಂ.ಕೆ ಅಳಗಿರಿ, ಎಂ.ಕೆ. ಮುತ್ತು, ಎಂ.ಕೆ. ತಮಿಳರಸು ಮತ್ತು ಎಂ.ಕೆ. ಸೆಲ್ವಿ ಅವರನ್ನು ಅಗಲಿದ್ದಾರೆ.
ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷಕ್ಕೆ 50 ವರ್ಷ ಅಧ್ಯಕ್ಷರಾಗಿ ದಾಖಲೆ ನಿರ್ಮಿಸಿದ್ದ ಕರುಣಾನಿಧಿ ಅವರು, ದಕ್ಷಿಣ ಭಾರತದ ಅತ್ಯಂತ ಪ್ರಭಾವಿ ರಾಜಕೀಯ ನಾಯಕರಲ್ಲಿ ಒಬ್ಬರಾಗಿದ್ದರು.
ಕರುಣಾನಿಧಿ ಅವರು 1969-2011ರವರೆಗೆ ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು.
ಡಿಎಂಕೆ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಆಸ್ಪತ್ರೆ ಬಳಿ ಜಮಾಯಿಸಿದ್ದು, ಆಸ್ಪತ್ರೆ ಒಳಗೆ ಮತ್ತು ಹೊರಗೆ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ರಾಜರತಿನಂ ಸ್ಟೇಡಿಯಂನಲ್ಲೂ ಸುಮಾರು 1200 ಪೊಲೀಸ್​ ಸಿಬ್ಬಂದಿಯನ್ನ​ ನಿಯೋಜನೆ ಮಾಡಲಾಗಿದೆ. ಇದರ ಜೊತೆಗೆ 500 ಸಶಸ್ತ್ರ ಪಡೆ ಮತ್ತು 700 ಸ್ಪೇಷಲ್​​​ ಫೋರ್ಸ್​ ಕಾರ್ಯ ನಿರ್ವಹಿಸುತ್ತಿದೆ. ಮುಂಜಾಗ್ರತಾ ಕ್ರಮವಾಗಿ ತಮಿಳುನಾಡಿನಾದ್ಯಂತ ಹೈಅಲರ್ಟ್‌ ಘೋಷಣೆ ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ