ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಐಸಿಯುಗೆ ದಾಖಲು

ಚೆನ್ನೈ:ಜು-೨೮: ತಮಿಳುನಾಡು ಮಾಜಿ ಸಿಎಂ, ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರ ಆರೋಗ್ಯದಲ್ಲಿ ಇನ್ನಷ್ಟು ಏರುಪೇರಾದ ಕಾರಣ ತಡರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕರಣಾನಿಧಿಯವರಿಗೆ ರಕ್ತದ ಒತ್ತಡ ದಿಢೀರ್‌ ಇಳಿಕೆಯಾದ ಕಾರಣ, ಅವರ ನಿವಾಸದಿಂದ ಚೆನ್ನೈನ ಕಾವೇರಿ ಆಸ್ಪತ್ರೆಗೆ ತಡರಾತ್ರಿ 1:30ರ ಸುಮಾರಿಗೆ ದಾಖಲಿಸಲಾಗಿದೆ. ಮೂತ್ರನಾಳದ ಸೋಂಕು ಮತ್ತು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ ಕರುಣಾನಿಧಿ ಅವರಿಗೆ ಗೋಪಾಲಪುರಂನಲ್ಲಿರುವ ಅವರ ನಿವಾಸದಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು.

ರಾತ್ರಿ ಕರುಣಾನಿಧಿ ಅವರ ನಿವಾಸದಲ್ಲಿ ವೈದ್ಯರ ತಂಡ ತಪಾಸಣೆ ನಡೆಸಿದ ಬಳಿಕ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದರು.

ರಕ್ತದ ಒತ್ತಡ ಈಗ ನಿಯಂತ್ರಣದಲ್ಲಿದೆ, ಆತಂಕ ಪಡುವ ಅಗತ್ಯವಿಲ್ಲ ಎಂದು ಡಿಎಂಕೆ ಮುಖಂಡ ಎ.ರಾಜಾ ಹೇಳಿದ್ದಾರೆ. ತಮಿಳುನಾಡು ರಾಜ್ಯಪಾಲ ಭನ್ವಾರಿಲಾಲ್‌ ಪುರೋಹಿತ್‌ ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್‌, ಎಂ.ಕೆ.ಅಲಗಿರಿ, ರಾಜ್ಯಸಭಾ ಸದಸ್ಯೆ ಕನಿಮೋಳಿ, ದುರೈಮುರುಗನ್‌ ಸೇರಿ ಅನೇಕ ಮುಖಂಡರು ಆಸ್ಪತ್ರೆಯಲ್ಲಿದ್ದಾರೆ. ಕಾರ್ಯಕರ್ತರು, ಅಭಿಮಾನಿಗಳು ಶನಿವಾರ ಆಸ್ಪತ್ರೆಯ ಎದುರು ಜಮಾಯಿಸಿದ್ದು, ತಮ್ಮ ನೆಚ್ಚಿನ ನಾಯಕನಿಗಾಗಿ ಪ್ರಾರ್ಥಿಸುತ್ತಿದ್ದಾರೆ.

M Karunanidhi,ICU,blood pressure

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ