ಮುಂಬೈ:ಜು-೩೦: ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ರಾಸಾಯನಿಕ ದಾಳಿ ನಡೆಸುವುದಾಗಿ ಬೆದರಿಕೆ ಒಡ್ಡಿದ್ದ ಆರೋಪದ ಮೇಲೆ ಮುಂಬೈ ಪೊಲೀಸರು ಸೆಕ್ಯೂರಿಟಿ ಗಾರ್ಡ್ ಒಬ್ಬನನ್ನು ಬಂಧಿಸಿದ್ದಾರೆ.
ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್ಜಿ)ಯ ಕಂಟ್ರೋಲ್ ರೂಂ.ಗೆ ಶುಕ್ರವಾರ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಪ್ರಧಾನಿಯ ಮೇಲೆ ರಾಸಾಯನಿಕ ದಾಳಿ ನಡೆಸುವುದಾಗಿ ಬೆದರಿಕೆ ಒಡ್ಡಿದ್ದ. ತಕ್ಷಣ ಕಾರ್ಯಪ್ರವೃತ್ತರಾದ ಎನ್ಎಸ್ಜಿ ಪಡೆ ಕರೆ ಬಂದಿದ್ದ ದೂರವಾಣಿ ಸಂಖ್ಯೆಯ ಬೆನ್ನತ್ತಿದಾಗ ಕರೆ ಮುಂಬೈನಿಂದ ಬಂದಿರುವುದು ತಿಳಿದು ಬಂದಿತ್ತು.
ಅಲ್ಲದೇ ಎನ್ಎಸ್ಜಿ ಪಡೆ ಕರೆ ಮಾಡಿದ ವ್ಯಕ್ತಿಯನ್ನು ಬಂಧಿಸುವಂತೆ ಮುಂಬೈ ಪೊಲೀಸರಿಗೆ ಸೂಚಿಸಿತ್ತು. ಅದರಂತೆ ಪೊಲೀಸರು ಜಾರ್ಖಂಡ್ ಮೂಲದ ಕಾಶಿನಾಥ್ ಮಂಡಲ್ ಎಂಬಾತನನ್ನು ಬಂಧಿಸಿದ್ದಾರೆ. ಈತ ಮುಂಬೈನ ವಾಕೇಶ್ವರ್ ಪ್ರದೇಶದಲ್ಲಿ ವಾಸಿಸುತ್ತಿದ್ದು, ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಕರೆ ಮಾಡಿದ ನಂತರ ಆತ ಸೂರತ್ಗೆ ಹೋಗುವ ರೈಲು ಹತ್ತಲು ಮುಂಬೈ ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದ. ಅಲ್ಲಿ ಆತನನ್ನು ಬಂಧಿಸಲಾಗಿದೆ.
ವಿಚಾರಣೆಯಲ್ಲಿ ಈತ ಎನ್ಎಸ್ಜಿ ಕಂಟ್ರೋಲ್ ರೂಂಗೆ ಕರೆ ಮಾಡಿದ್ದು ತಾನೇ ಎಂದು ಒಪ್ಪಿಕೊಂಡಿದ್ದಾನೆ. ಸಮಾಜದಲ್ಲಿ ಭಯದ ವಾತಾವರಣ ಮೂಡಿಸಲು, ಕೋಮು ಗಲಭೆ ಸೃಷ್ಟಿಸಲು ಮತ್ತು ಭಾರತೀಯರ ಮಧ್ಯೆ ಶತೃತ್ವವನ್ನು ಹುಟ್ಟಿಹಾಕಲು ಈ ಕೆಲಸ ಮಾಡಿದೆ ಎಂದು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
Man Allegedly Warns Of “Chemical Attack” On PM In Phone Call, Arrested