ನವದೆಹಲಿ: ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ವಿರುದ್ಧ ವಿಪಕ್ಷಗಳ ಅವಿಶ್ವಾಸ ಮಂಡನೆಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ತಿರುಗೇಟು ನೀಡಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಇದು ಕೇಂದ್ರ ಸರ್ಕಾರದ ಮೇಲಿನ ವಿಶ್ವಾಸದ ಪರೀಕ್ಷೆಯಲ್ಲ, ಬದಲಿಗೆ ಕಾಂಗ್ರೆಸ್ ಮಿತ್ರಪಕ್ಷಗಳ ವಿಶ್ವಾಸದ ಪರೀಕ್ಷೆ ಎಂದು ಲೇವಡಿ ಮಾಡಿದ್ದಾರೆ.
30 ವರ್ಷಗಳ ಬಳಿಕ ಕೇಂದ್ರದಲ್ಲಿ ಬಹುಮತದ ಸರ್ಕಾರ ಬಂದಿದೆ. ಹೀಗಿದ್ದರು ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಮುಂದಾಗಿವೆ. ಇನ್ನು ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಯಾಗದೆ ಹೋದರೆ ಆಕಾಶ ಬಿದ್ದುಹೋಗುತ್ತದೆಯೇ ಅಥವಾ ಭೂಕಂಪವಾಗುತ್ತದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಪರೋಕ್ಷವಾಗಿ ಟೀಕಿಸಿದರು.
ವಿಪಕ್ಷಗಳೆಲ್ಲಾ ಮೋದಿ ಹಠಾವೋ ದೇಶ್ ಬಚಾವೋ ಎಂಬ ಮಾತುಗಳನ್ನಾಡುತ್ತಿದೆ. ಇದನ್ನು ಕೇಳಿ ನನಗೆ ಶಾಕ್ ಆಯಿತು. ಮೋದಿಯನ್ನು ತೊಲಗಿಸಲು ಇಷ್ಟೊಂದು ಪ್ರಯತ್ನ ಮಾಡಬೇಕಿತ್ತಾ? 2019ರಲ್ಲಿ ಮತ್ತೆ ಅಧಿಕಾರಿಕ್ಕೆ ಬರುವುದಕ್ಕೆ ಬಿಡುವುದಿಲ್ಲ ಎಂದು ವಿಪಕ್ಷಗಳು ಹೇಳುತ್ತಿವೆ. ನಮಗೆ 125 ಕೋಟಿ ಜನರ ಬೆಂಬಲವಿದೆ ಅದಕ್ಕೆ ನಾವು ಇಲ್ಲಿದ್ದೇವೆ. ಇನ್ನು 2019ರಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾದರೆ ನಾನೇ ಪ್ರಧಾನಿ ಆಗುತ್ತೇನೆ ಎಂದು ಕೆಲವರು ಹೇಳಿದ್ದಾರೆ. ಇನ್ನು ಮಿತ್ರಪಕ್ಷದಲ್ಲಿ ಪ್ರಧಾನಿ ಆಗಲು ತುಂಬಾ ಜನ ಕನಸು ಕಾಣುತ್ತಿದ್ದಾರೆ ಎಂದರು.
ಸ್ವಚ್ಛ ಭಾರತ್, ಅಂತಾರಾಷ್ಟ್ರೀಯ ಯೋಗ ದಿನಾಚರಣೆ, ಮೇಕ್ ಇನ್ ಇಂಡಿಯಾ, ಜಿಎಸ್ಟಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ, ಆರ್ಬಿಐ ಗೌವರ್ನರ್ ಯಾರ ಮೇಲೂ ಇವರಿಗೆ ವಿಶ್ವಾಸವಿಲ್ಲ. ಇನ್ನು ಕೇಂದ್ರ ಸರ್ಕಾರದ ಮೇಲೆ ಇನ್ನೆಲ್ಲಿ ವಿಶ್ವಾಸ ಹುಟ್ಟುತ್ತದೆ.
ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಭಯೋತ್ಪದಕರನ್ನು ಹೊಡೆದುರುಳಿಸಿದರು ಇದು ನಕಲಿ ಸರ್ಜಿಕಲ್ ಸ್ಟ್ರೈಕ್ ಎಂದು ಹೇಳಿದ್ದರು. ಇದು ದೇಶದ ಭಾರತೀಯ ಯೋಧರಿಗೆ ವಿಪಕ್ಷಗಳು ಮಾಡಿದ ಅಪಮಾನ. ಪ್ರತಿಯೊಂದಕ್ಕೂ ಸಾಕ್ಷಿ ನೀಡಿ ಎಂದು ಕೇಳುತ್ತಾರೆ. ಸಾಕ್ಷ್ಯ ನೀಡಿದರೂ ಮತ್ತೊಂದು ಪ್ರಶ್ನೆ ಎತ್ತುತ್ತಾರೆ ಎಂದರು.
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ತೆಲುಗು ದೇಶಂ ಪಕ್ಷದ ಸಂಸದರು ಸದನದ ಬಾವಿಗೆ ಇಳಿದು ಪ್ರತಿಭಟಿಸಿದರು.