ದಾಂಡೇಲಿ:
ಸಮೃದ್ದ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯೋಗ ದಿವ್ಯೌಷಧವಾಗಿದ್ದು, ಈ ಕಾರಣಕ್ಕಾಗಿಯೆ ಋಷಿ ಮುನಿಗಳಿಂದ ಬಳವಳಿಯಾಗಿ ಬಂದ ಯೋಗ ಇಂದು ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿಕೊಂಡಿದೆ. ಯೋಗವನ್ನು ದೈನಂದಿನ ಮಹತ್ವದ ಭಾಗವಾಗಿ ಪರಿಗಣಿಸುವುದರ ಜೊತೆಗೆ ಅಳವಡಿಸಿಕೊಳ್ಳುವ ಅಗತ್ಯತೆ ಇದೆ. ಯೋಗದ ಪ್ರಾಮುಖ್ಯತೆಯನ್ನು ಮನಗಂಡು ವಿಶೇಷವಾಗಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಯೋಗವನ್ನು ನಮ್ಮ ಜೀವನದ ಪ್ರಧಾನ ಕರ್ತವ್ಯವೆಂದು ಭಾವಿಸಿ ಪ್ರತಿಯೊಬ್ಬರು ಪ್ರತಿದಿನ ಯೋಗಾಭ್ಯಾಸಗಳನ್ನು ಮಾಡುವುದರ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಡಿಯಿಡಬೇಕೆಂದು ಉದ್ಯಮಿ ಹಾಗೂ ಕಲಾಶ್ರೀ ಸಂಸ್ಥೆಯ ಅಧ್ಯಕ್ಷ ಎಸ್.ಪ್ರಕಾಶ ಶೆಟ್ಟಿ ಕರೆ ನೀಡಿದರು.
ಅವರು ನಗರದ ಅರಿವು ಪೌಂಡೇಶನ್ ಆಶ್ರಯದಲ್ಲಿ ಸ್ಥಳೀಯ ಸಉಭಾಸನಗರದ ಒಳ ಕ್ರೀಡಾಂಗಣದಲ್ಲಿ ಗುರುವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ಹಮ್ಮಿಕೊಂಡಿದ್ದ ಯೋಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅರಿವು ಪೌಂಡೇಶನ್ ಅವರು ಇಂಥಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜನಜಾಗೃತಿ ಮೂಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಅರಿವು ಪೌಂಡೇಶನ್ ಕಾರ್ಯವನ್ನು ಕೊಂಡಾಡಿದರು.
ಅರಿವು ಪೌಂಡೇಶನ್ ಅಧ್ಯಕ್ಷ ರೋಶನ್ ನೇತ್ರಾಳಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಯೋಗದ ಮಹತ್ವವನ್ನು ವಿವರಿಸಿ, ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಹೆಮ್ಮೆ ನಮ್ಮ ದೇಶಕ್ಕಿದೆ. ಇಂದು ಜಗತ್ತಿನ ಬಹುತೇಕ ದೇಶಗಳು ಯೋಗಕ್ಕೆ ವಿಶೇಷ ಪ್ರಾದನ್ಯತೆ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರ್ಶ ಪರಂಪರೆಯನ್ನು ಉಳಿಸಿ, ಬೆಳೆಸುವುದರ ಜೊತೆಗೆ ಸದಢೃ ಆರೋಗ್ಯವಂತ ಸಮಾಜ ನಿರ್ಮಾಣದ ಸಂಕಲ್ಪವನ್ನು ತೊಟ್ಟು ಅರಿವು ಪೌಂಡೇಶನ್ ಪ್ರತಿವರ್ಷ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಯೋಗ ಇದು ಒಂದು ದಿನಕ್ಕೆ ಸೀಮಿತವಾಗದೇ, ನಿತ್ಯ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳುವಂತಾಗಬೇಕು. ಆ ಜಾಗೃತಿ ಜನಮಾನಸಕ್ಕೆ ಆಗಬೇಕೆಂಬ ಉದ್ದೇಶವನ್ನು ಹೊತ್ತಿ ವಿಶ್ವ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಅರಿವು ಪೌಂಡೇಶನ್ ಹಮ್ಮಿಕೊಳ್ಳುವ ಸಮಾಜಮುಖಿ ಕಾರ್ಯಕ್ಕೆ ನಗರದಲ್ಲಿ ಉತ್ತಮ ಸ್ಪಂದನೆ ದೊರೆಯುತ್ತಿರುವುದು ಸಂಸ್ಥೆಯ ಪ್ರಗತಿಗೆ ಬಹುದೊಡ್ಡ ಶಕ್ತಿ ಎಂದರು.
ಮುಖ್ಯ ಅತಿಥಿಗಳಾಗಿ ವಕೀಲ ಎಸ್.ಸೋಮಕುಮಾರ್ ಅರಿವು ಪೌಂಡೇಶನ್ ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ದಾಂಡೇಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಗುರುಶಾಂತ ಜಡೆಹಿರೇಮಠ, ಉದ್ಯಮಿ ಹಾಗೂ ಶಿರಸಿ ಅರ್ಬನ್ ಬ್ಯಾಂಕ್ ನಿದರ್ೇಶಕ ಟಿ.ಎಸ್.ಬಾಲಮಣಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಯೋಗ ಗುರು ರಮೇಶ ಲಮಾಣಿಯವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಯೋಗ ಗುರು ರಮೇಶ ಲಮಾಣಿಯವರಿಂದ ಯೋಗಾಬ್ಯಾಸ ಜರುಗಿತು. ಕಾರ್ಯಕ್ರಮದಲ್ಲಿ ಅರಿವು ಪೌಂಡೇಶನ್ ವತಿಯಿಂದ ಯೋಗ ಗುರು ರಮೇಶ ಲಮಾಣಿಯವರನ್ನು ಸನ್ಮಾನಿಸಲಾಯಿತು.
ಅರಿವ್ ಪೌಂಡೇಶನ್ ಇದರ ಸಂಯೋಜಕ ಪ್ರಶಾಂತ ಬಸೂರ್ತೆಕರ ಸ್ವಾಗತಿಸಿದ ಕಾರ್ಯಕ್ರಮಕ್ಕೆ ನಿರ್ದೇಶಕ ದಶರಥ ಬಂಡಿವಡ್ಡರ ವಂದಿಸಿದರು. ಸಂದೇಶ್.ಎಸ್.ಜೈನ್ ಕಾರ್ಯಕ್ರಮ ನಿರೂಪಿಸಿದರು. ಅರಿವು ಪೌಂಡೇಶನ್ ಪದಾಧಿಕಾರಿಗಳಾದ ಸಂಜಯ ಚವ್ಹಾಣ್, ಜಗಮಲಸಿಂಗ್ ರಾಠೋಡ, ಅನಂತರಾಜ ನಾಯಕ, ರವಿ ಗಾಂವಕರ, ಗಜಾನನ ನಾಯ್ಕ, ಸುರೇಶ ಪಾಲನಕರ, ನವೀನ ಕಾಮತ್, ರವಿ ಸುತಾರ, ಪ್ರಶಾಂತ ಧುಮೆ, ಪ್ರಶಾಂತ ಜೋಗಳೆಕರ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು