ಸಾಮಾನ್ಯ ಸಭೆಯಲ್ಲಿ ಮತ್ತೇ ಸದ್ದು ಮಾಡಿದ ಅತಿಕ್ರಮಣ

ದಾಂಡೇಲಿ:

ನಗರ ಸಭೆಯ ಬಹುತೇಕ ಸಾಮಾನ್ಯ ಸಭೆಗಳಲ್ಲಿ ನಗರದಲ್ಲಿ ನಡೆಯುತ್ತಿರುವ ಅತಿಕ್ರಮಣಗಳ ಬಗ್ಗೆ ಚರ್ಚೆ ನಡೆದರೂ, ಆ ಬಗ್ಗೆ ನಗರ ಸಭೆ ಗಂಭೀರ ಕ್ರಮಕೈಗೊಳ್ಳುವಲ್ಲಿ ಸಂಪೂರ್ಣ ಸೋತಿರುವ ಕುರಿತು ವ್ಯಾಪಕ ವಿರೋಧ ವ್ಯಕ್ತಪಡಿಸಿ ದಾಂಡೇಲಿ ನಗರ ಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆಯಾಯಿತು.

ಅತಿಕ್ರಮಣದ ವಿಚಾರವಾಗಿ ಸದಸ್ಯ ನಂದೀಶ ಮುಂಗರವಾಡಿಯವರು ನಗರದಲ್ಲಿ ಎಲ್ಲೆಂದರಲ್ಲಿ ಅತಿಕ್ರಮಣ ಕಟ್ಟಡಗಳು ತಲೆಯೆತ್ತುತ್ತಿದ್ದು, ನಗರ ಸಭೆ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಇದು ಹಲವು ಅನುಮಾನಕ್ಕೆ ಎಡೆ ಮಾಟಿಕೊಟ್ಟಿದೆ ಎಂದು ಆಕ್ಷೇಪಿಸಿದಾಗ ನಮ್ಮ ಗಮನಕ್ಕೆ ಬಂದ ಅತಿಕ್ರಮಣಗಳನ್ನು ತೆರವುಗೊಳಿಸುತ್ತಿದ್ದೇವೆ ಎಂದು ನಗರಸಭಾ ಅಧ್ಯಕ್ಷ ನಾಗೇಶ ತಿಳಿಸಿದರು.

ನಂತರ ಅನಿಲ್ ದಂಡಗಲ ನಮ್ಮ ತಂದೆಯವರು ನಿರ್ಮಿಸುತ್ತಿದ್ದ ಕಟ್ಟಡ ಅತಿಕ್ರಮಣವೆಂದು ಜಿಲ್ಲಾಧಿಕಾರಿಗಳ ಸೂಚನೆ ಎಂದು ಹೇಳಿ ಸೀಜ್ ಮಾಡಿದ್ದಾರೆ. ಆದರೆ ನಗರದಲ್ಲಿ ಹಲವು ಅತಿಕ್ರಮಣಗಳು ನಡೆಯುತ್ತಿದ್ದರೂ ಯಾವ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ. ಸಿಬ್ಬಂದಿಗಳ ಕಣ್ಮುಂದೆಯೇ ಅತಿಕ್ರಮಣ, ಅಕ್ರಮ ಕಟ್ಟಡ ನಿರ್ಮಿಸುತ್ತಿದ್ದರೂ ಸುಮ್ಮನಿರುತ್ತಾರೆ ಎಂದು ಆಕ್ಷೇಪಿಸಿದಾಗ ನಗರಸಭಾ ಅಧ್ಯಕ್ಷ ನಾಗೇಶ ಸಾಳುಂಕೆಯವರು ಅತಿಕ್ರಮಣ ತೆರವುಗೊಳಿಸಲು ನಾನು ಪೌರಾಯುಕ್ತರಿಗೆ ಹೇಳುತ್ತಲೇ ಬರುತ್ತಿದ್ದೇನೆ ಎಂದರು.

ಗಾಂಧಿನಗರದಲ್ಲಿ ನಡೆಯುತ್ತಿರುವ ಅತಿಕ್ರಮಣದ ಬಗ್ಗೆ ರಿಯಾಜ ಶೇಖ್ ಅವರು. ಅಲ್ಲಿ 40-50 ಮನೆಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಆದರೆ ಯಾಕೆ ಯಾವ ಕ್ರಮ ಜರುಗಿಸಿಲ್ಲ ಎಂದು ಪ್ರಶ್ನಿಸಿದರು. ಆಗ ಯಾಸ್ಮಿನ್ ಕಿತ್ತೂರ ಹೌದಾ ಗಾಂದೀನಗರದಲ್ಲಿ ಅಷ್ಟೊಂದು ಅತಿಕ್ರಮಣಗಳಾಗಿವೆಯಾ, ಹಾಗಾದರೆ ನಮ್ಮ ವಾರ್ಡನಲ್ಲಿ ಖಾಲಿ ಜಾಗವಿದೆ. ಅಲ್ಲಿಯೂ ಬಡವರಿಂದ ಅತಿಕ್ರಮಣ ಮಾಡಲು ಹೇಳುತ್ತೇವೆ ಎಂದರು. ಮಂಜು ರಾಠೋಡ್ ಸಣ್ಣ ಅತಿಕ್ರಮಣ ತೆರವುಗೊಳಿಸುವ ಅಧಿಕಾರಿಗಳು ದೊಡ್ಡ ಅತಿಕ್ರಮಣಗಳನ್ಯಾಕೆ ಬಿಡುತ್ತೀರಿ ಎಂದು ಪ್ರಶ್ನಿಸಿದರು.

ಕೀರ್ತಿ ಗಾಂವಕರ ಮಾತನಾಡಿ ದಾಂಡೇಲಿ ನಗರದ ಹಲವೆಡೆ ಅತಿಕ್ರಮಣ, ಅಕ್ರಮ ಕಟ್ಟಡಗಳು ನಿರ್ಮಾಣಗೊಳ್ಳೂತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ನಿರಂತರವಾಗಿ ಬರುತ್ತಿದೆ. ನಾವೂ ಸಹ ಕಳೆದ ಸಭೆಯಲ್ಲಿಯೇ ಎಲ್ಲ ಅತಿಕ್ರಮಣ ತೆರವುಗೊಳಿಸಲು ಪೌರಾಯುಕ್ತರಿಗೆ ಅಧಿಕಾರ ಕೊಟ್ಟಿದ್ದೆವು. ಸದಸ್ಯರ್ಯಾರೂ ಹಸ್ತಕ್ಷೇಪ ಮಾಡುವುದಿಲ್ಲ ಎಂತಲೂ ಹೇಳಿದ್ದೆವು. ಆದರೆ ಪೌರಾಯುಕ್ತರು ಹಾಗೂ ಸಿಬ್ಬಂದಿಗಳು ಯಾಕೆ ಹಿಂಜರಿಯುತ್ತಿದ್ದಾರೋ ಗೊತ್ತಿಲ್ಲ. ಈಗ ನಡೆಯುತ್ತಿರುವ ಅತಿಕ್ರಮಣ, ಅಕ್ರಮ ಕಟ್ಟಡಗಳಲ್ಲಿ ಯಾವ ನಗರಸಭಾ ಸದಸ್ಯರ ಹಸ್ತಕ್ಷೇಪವೂ ಇಲ್ಲ. ಇದ್ದರೆ ಹೇಳಲಿ. ಪೌರಯುಕ್ತರು ಈ ಎಲ್ಲ ಅತಿಕ್ರಮಣಗಳನ್ನು ತಕ್ಷಣ ತೆರವುಗೊಳಿಸಬೇಕು. ಇಲ್ಲವೇ ಜಿಲ್ಲಾದಿಕಾರಿಗಳೇ ಪೌರಾಯುಕ್ತರ ಮೇಲೆ ಕ್ರಮ ಕೈಗೊಳ್ಳಿ ಎಂದು ಸಭೆಯಲ್ಲಿ ಒತ್ತಾಯಿಸಿದರು.

ಸಂಡೇ ಮಾರ್ಕೇಟ್ ಮೀನು-ಮಾಂಸ ಮಾರುಕಟ್ಟೆಯ ಬಳಿ ತಾತ್ಕಾಲಿಕವಾಗಿ ಕೆಲವರಿಗೆ ನೀಡಿದ್ದ ಮಳಿಗೆಗಳನ್ನು ಈವರೆಗೂ ತೆರವುಗೊಳೀಸದೇ ಬಿಟ್ಟ ಬಗ್ಗೆ ನಂದೀಶ ಮುಂಗರವಾಡಿ ಪ್ರಶ್ನಿಸಿದರು. ಉಪಾಧ್ಯಕ್ಷ ಮಹಮ್ಮದ್ಗೌಸ್ ಪಣಿಬಂದರವರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿರುವ ಬಗ್ಗೆ, ಬಡ ರೋಗಿಗಳು ಪರದಾಡುತ್ತಿರುವ ಬಗ್ಗೆ ತಿಳಿಸಿ ನಗರಾಡಳಿತ ಈ ಬಗ್ಗೆ ಗಮನ ಹರಿಸಬೇಕೆಂದರು.

ಕೊನೆಯಲ್ಲಿ ಪೌರಾಯುಕ್ತ ಜತ್ತಣ್ಣ ಅವರ ವಂದನಾರ್ಪಣೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ