ಬೆಂಗಳೂರು,ಆ.3-ತಮ್ಮನ್ನು ಸಂಪುಟಕ್ಕೆ ತೆಗೆದುಕೊಳ್ಳುವಂತೆ ಮಾಜಿ ಸಿಎಂ ಯಡಿಯೂರಪ್ಪನವರ ನಿವಾಸ ಕಾವೇರಿ ನಿವಾಸಕ್ಕೆ ಸಚಿವ ಆಕಾಂಕ್ಷಿಗಳ ದಂಡು ಇಂದೂ ಕೂಡ ಧಾವಿಸಿ ಲಾಬಿ ಮುಂದುವರೆಸಿದೆ.
ಬೆಳಗ್ಗೆ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಕಾವೇರಿ ನಿವಾಸಕ್ಕೆ ಆಗಮಿಸಿ ಸುಮಾರು ಹೊತ್ತು ಚರ್ಚೆ ನಡೆಸಿ ಅಲ್ಲಿಂದ ನಿರ್ಗಮಿಸಿದರು.
ಆದರೆ ಅವರು ಸಂಪುಟಕ್ಕೆ ತೆಗೆದುಕೊಳ್ಳುವಂತೆ ತಮ್ಮ ತಂದೆಯ ಬಳಿ ಮನವಿ ಮಾಡಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಲಿಲ್ಲ.
ಇನ್ನು ಕಡೂರು ಶಾಸಕ ಬೆಳ್ಳಿ ಪ್ರಕಾಶ್, ಗಂಗಾವತಿಯ ಪರಣ್ಣ ಮನವಳ್ಳಿ, ಹಾವೇರಿಯ ನೆಹರು ಓಲೈಕರ್, ಮುದ್ದೇಬಿಹಾಳದ ಎ.ಎಸ್.ನಡಹಳ್ಳಿ, ಸಾಗರದ ಹರತಾಳ್ ಹಾಲಪ್ಪ, ಮತ್ತಿತರರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ತಮ್ಮನ್ನು ಸಂಪುಟಕ್ಕೆ ಪರಿಗಣಿಸುವಂತೆ ಮನವಿ ಮಾಡಿದ್ದಾರೆ.
ಕೇವಲ ಶಾಸಕರು ಮಾತ್ರವಲ್ಲದೆ ಅವರ ಬೆಂಬಲಿಗರು, ಅಭಿಮಾನಿಗಳು ಕೂಡ ಕಾವೇರಿ ನಿವಾಸದ ಬಳಿ ಬಂದು ತಮ್ಮ ನಾಯಕನ ಪರವಾಗಿ ಜೈಕಾರ ಕೂಗಿ ಸಚಿವ ಸ್ಥಾನ ನೀಡಬೇಕೆಂದು ಬೇಡಿಕೆ ಇಡುತ್ತಿದ್ದಾರೆ.
ಇನ್ನೊಂದೆಡೆ ಮಾಜಿ ಸಚಿವ ಹಾಗೂ ಹಿರೇಕೆರೂರು ಕ್ಷೇತ್ರದ ಶಾಸಕ ಬಿ.ಸಿ.ಪಾಟೀಲ್ ತಮ್ಮ ಸ್ವಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಚಿವ ಸ್ಥಾನ ಲಭಿಸುವಂತೆ ದೇವರ ಮೊರೆ ಹೋಗಿದ್ದಾರೆ.
ಹೀಗೆ ಆಕಾಂಕ್ಷಿಗಳು ಸಂಪುಟ ಸೇರಲು ನಾನಾ ರೀತಿಯ ಸರ್ಕಸ್ ನಡೆಸುತ್ತಿರುವುದರಿಂದ ಯಾರಿಗೆ ಸಚಿವ ಸ್ಥಾನ ಸಿಗುತ್ತದೆ ಎಂಬುದು ಕುತೂಹಲಕಾರಿಯಾಗಿದೆ ಉಳಿದಿದೆ.