ಹೊಸದಿಲ್ಲಿ: ಸಂಭ್ರಮಾಚರಣೆಗೆ ಜನ ಸಿದ್ಧವಾಗಿರುವ ಬೆನ್ನಲ್ಲೇ ಹೊಸ ವರ್ಷದ ಸಂದರ್ಭದಲ್ಲಿ ಜನ ಸಾಮೂಹಿಕವಾಗಿ ಸೇರದಂತೆ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ಜನ ಮೈಮರೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು, ಜನಸಂದಣಿ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ದೇಶದಲ್ಲಿ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ನಿರಾಳ ತರುವ ವಿಚಾರವೇ ಆದರೂ, ವೈರಾಣು ಪರಿಣಾಮ ಕಡೆಗಣಿಸಿ ಮೈಮರೆಯುವಂತಿಲ್ಲ ಎಂದು ಎಚ್ಚರಿಸಲಾಗಿದೆ.
ರೂಪಾಂತರಗೊಂಡ ವೈರಾಣುವಿನ ಬಗ್ಗೆಯೂ ಜಾಗೃತಿ ವಹಿಸಬೇಕಾಗಿದ್ದು,ಈ ಹಿಂದಿನಂತೆಯೇ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಅನುಸರಿಸಲೇಬೇಕಾದ ಅಗತ್ಯವಿದೆ. ಈ ಹಿನ್ನೆಲೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಎಲ್ಲ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ.
ಸಂಭ್ರಮಾಚರಣೆಗೆ ಜನರು ಉತ್ಸುಕರಾಗಿರುತ್ತಾರೆ. ಈ ಪರಿಸ್ಥಿತಿಯಲ್ಲಿ ಸರ್ಕಾರ ಮತ್ತಷ್ಟು ಜಾಗರೂಕತೆ ವಹಿಸಬೇಕಿದೆ. ಯುರೋಪ್, ಅಮೆರಿಕ , ಬ್ರಿಟನ್ನಲ್ಲಿ ರೂಪಾಂತರ ಸೋಂಕಿನ ಹರಡುವಿಕೆ ಗಮನದಲ್ಲಿರಿಸಿಕೊಂಡು ದೇಶದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ನಿರ್ದೇಶಿಸಲಾಗಿದೆ.
ಚಳಿಗಾಲದಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಸಂಭ್ರಮಾಚರಣೆಗಾಗಿ ಜನರು ಒಟ್ಟಿಗೆ ಸೇರುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆ ಲೆ ಜನಸಂದಣಿ ಹೆಚ್ಚುವ ಸ್ಥಗಳಲ್ಲಿ ಕ್ರಮ ಅನುಸರಿಸಿ,ದಟ್ಟಣೆ ನಿಯಂತ್ರಿಸಬೇಕ ಎಂದು ಹೇಳಿದ್ದಾರೆ. ಜತೆಗೆ ಅಗತ್ಯವಿದ್ದರೆ ಸೀಮಿತ ಪ್ರದೇಶಗಳಲ್ಲಿ ರಾತ್ರಿ ಕಫ್ರ್ಯೂ ಜಾರಿಗೊಳಿಸಬೇಕು ಎಂದು ಸೂಚಿಸಲಾಗಿದೆ.