ಹೊಸದಿಲ್ಲಿ: ಬೆಳವಣಿಗೆ ಎಂದಿಗೂ ಮಾನವ ಕೇಂದ್ರಿತ ವಿಧಾನ ಅನುಸರಿಸಬೇಕಿದ್ದು, ಜಾಗತಿಕ ಬೆಳವಣಿಗೆ ಕುರಿತಾದ ಚರ್ಚೆ ಕೆಲವರ ಮಧ್ಯೆ ನಡೆಯಲು ಸಾಧ್ಯವಿಲ್ಲ. ವಿಶ್ವದ ಪ್ರಗತಿಗೆ ಹಲವು ರಾಷ್ಟ್ರಗಳು ಒಟ್ಟಾಗಿ ಶ್ರಮಿಸಬೇಕಿದ್ದು, ಧ್ಯೇಯ ವಿಶಾಲವಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಇಂಡೋ – ಜಪಾನ್ 6ನೇ ಸಂವಾದದಲ್ಲಿ ಭಾಗಿಯಾಗಿ, ಮಾನವೀಯತೆಗೆ ವಿಶ್ವ ಆದ್ಯತೆ ನೀಡುವ ಮೂಲಕ ಒಟ್ಟಾಗಿ ಪ್ರಗತಿ ಸಾಸಬೇಕು ಎಂದು ಕರೆ ನೀಡಿದ್ದಾರೆ. ಜತೆಗೆ ಸುಧಾರಿತ ಬಹುಪಕ್ಷೀಯ ವ್ಯವಸ್ಥೆಗೆ ಮತ್ತೊಮ್ಮೆ ಒತ್ತು ನೀಡಿದ್ದು, ಪರಿಸರ ಸಂರಕ್ಷಣೆ ಕುರಿತಾಗಿಯೂ ಉಲ್ಲೇಖಿಸಿದ್ದಾರೆ.
ದ್ವೇಷವಿರುವ ಕಡೆ ಎಂದಿಗೂ ಶಾಂತಿ ಇರುವುದಿಲ್ಲ. ಈ ಹಿಂದಿನಿಂದಲೂ ಮಾನವೀಯತೆ ಸಹಕಾರದ ಬದಲಿಗೆ ವೈಷಮ್ಯದ ಮಾರ್ಗ ಹಿಡಿದಿದೆ. ಸಾಮ್ರಾಜ್ಯಶಾಹಿ ವ್ಯವಸ್ಥೆಯಿಂದ ವಿಶ್ವಯುದ್ಧದ ತನಕ, ಶಸ್ತ್ರಾಸ್ತ್ರ ಸಂಗ್ರಹದಿಂದ ಬಾಹ್ಯಾಕಾಶ ತಲುಪುವ ತನಕ ರಾಷ್ಟ್ರಗಳ ನಡುವೆ ಕೇವಲ ಸ್ಪರ್ಧೆಯಿತ್ತು. ಒಬ್ಬರನ್ನೊಬ್ಬರ ಹೇಗೆ ಸೋಲಿಸಬೇಕು ಎಂಬ ಲೆಕ್ಕಚಾರವಿತ್ತು. ಆದರೆ ಈಗಲಾದರೂ ಜಗತ್ತು ಒಟ್ಟಾಗಿ ಹೇಗೆ ಪ್ರಗತಿ ಸಾಸುವ ಬಗ್ಗೆ ಕಾರ್ಯನಿರತವಾಗಬೇಕು ಎಂದು ತಿಳಿಸಿದ್ದಾರೆ.
ಭಗವಂತ ಶ್ರೀ ಬುದ್ಧನ ಬೋಧನೆಗಳು ಕೂಡ ದ್ವೇಷ ತ್ಯಜಿಸಿ ಪ್ರಗತಿಯ ಮಾರ್ಗ ಅನುಸರಿಸಲು ಪ್ರೇರಣೆ ನೀಡುತ್ತಿದ್ದು, ವಿಶಾಲ ಹೃದಯ ಹೊಂದಬೇಕೆಂದು ಕಲಿಸುತ್ತವೆ ಎಂದು ಹೇಳಿದ್ದಾರೆ. ಅಲ್ಲದೇ ಭೂತಕಾಲದಿಂದ ಪಾಠ ಕಲಿತು, ಉತ್ತಮ ಭವಿಷ್ಯಕ್ಕಾಗಿ ಶ್ರಮಿಸಬೇಕೆಂದು ತಿಳಿಸುತ್ತವೆ. ಇದುವೆ ನಾವು ಮುಂದಿನ ಪೀಳಿಗೆಗೆ ನೀಡುವ ಅತ್ಯುತ್ತಮ ಕೊಡುಗೆ ಎಂದಿದ್ದಾರೆ.