ಹೊಸದಿಲ್ಲಿ: ಬಾಂಗ್ಲಾ ದೇಶವು ಕಾಕ್ಸ ಬಾಜಾರ್ ಕ್ಯಾಂಪ್ಗಳಲ್ಲಿ ಮಿತಿಮೀರಿರುವ ರೊಹಿಂಗ್ಯಾ ನಿರಾಶ್ರಿತರನ್ನು ಕರಾವಳಿಗೆ ಹತ್ತಿರವಿರುವ ಭಾಸಾನ್ ಛಾರ್ ತಾಣಕ್ಕೆ ಕಳುಹಿಸಲು ಆರಂಭಿಸಿದೆ. ಛಾರ್ ಎಂದರೆ ಬಂಗಾಳಿ ಭಾಷೆಯಲ್ಲಿ ಸಂಗ್ರಹವಾದ ಎಂದು ಅರ್ಥ.
ಮೈನ್ಮಾರ್ನ ರಾಖೈನ್ ಪ್ರಾಂತ್ಯದಲ್ಲಿ 2016ರಲ್ಲಿ ಸೈನ್ಯದ ದೌರ್ಜನ್ಯದಿಂದ ಪಲಾಯನ ಮಾಡಿದ 8 ಲಕ್ಷಕ್ಕೂ ಅಕ ರೋಹಿಂಗ್ಯಾಗಳು ಕಾಕ್ಸ್ಬಜಾರ್ನಲ್ಲಿ ಟೆಂಟ್ಗಳಲ್ಲಿ ಸ್ವಚ್ಛತೆಯಿಲ್ಲದ ಅನಾರೋಗ್ಯಕರ ಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ. ಭಾಸಾನ್ ಛಾರ್ ಪ್ರದೇಶವು ಬಾಂಗ್ಲಾದ ನೌಖೋಲಿಯಿಂದ 39 ಕಿ.ಮೀ. ದೂರದಲ್ಲಿದ್ದು ಒಂದು ಲಕ್ಷ ರೋಹಿಂಗ್ಯಾಗಳನ್ನು ಅಲ್ಲಿಗೆ ಸ್ಥಳಾಂತರಿಸಲು ಬಾಂಗ್ಲಾ ಯೋಜಿಸಿದೆ.
2017ರಲ್ಲಿ ಈ ಸ್ಥಳಾಂತರ ನಡೆಸಲು ಯೋಜಿಸಲಾಗಿತ್ತು. 2018ರಲ್ಲಿ ಪ್ರಧಾನ ಮಂತ್ರಿ ಶೇಖ್ ಹಸೀನಾ, ಇದು ತಾತ್ಕಾಲಿಕ ಕ್ರಮವೆಂದು ಹೇಳಿದ್ದರು. ಆದರೆ ಅವರ ಸಂಪುಟದ ಸಚಿವರೊಬ್ಬರು, ದ್ವೀಪಕ್ಕೆ ಸ್ಥಳಾಂತರಗೊಂಡವರು ಮತ್ತೆ ಮೈನ್ಮಾರ್ಗೆ ವಾಪಸ್ ಹೋಗಬೇಕು ಎಂದು ಆಗ್ರಹಿಸಿದ್ದರು. ಅಂತಾರಾಷ್ಟ್ರೀಯ ವಿಷಯದ ಕಾರಣ ಆಗ ನಿರ್ಧಾರ ಕೈಬಿಡಲಾಗಿತ್ತು.
ಭಾಸಾನ್ ಛಾರ್ ದ್ವೀಪದ ರೀತಿಯಲ್ಲಿದ್ದು, ಮಣ್ಣು ಹಾಗೂ ನೀರು ಹರಿದು ಹೋಗುವ ಸ್ಥಳ. ಮುಂಗಾರಿನಲ್ಲಿ ನೀರಿನಿಂದ ಆವೃತವಾಗುತ್ತದೆ. ಈ ಸ್ಥಳವು ಬಂಗಾಳಕೊಲ್ಲಿ ಸೇರುವ ಮೇಘನಾ ನದಿಯ ಮುಖಜಭೂಮಿ. ನದಿಯ ಹೂಳಿನಿಂದ ಕೂಡಿದ ಈ ಪ್ರದೇಶವನ್ನು 2006ರಲ್ಲಿ ಗುರುತಿಸಲಾಯಿತು. ಗೂಗಲ್ನಲ್ಲಿ ನೀರಿನ ಅಡಿಯಲ್ಲಿ ಸಂಗ್ರಹವಾದ ಕೆಸರಿನ ಭಾಗವೆಂದು ತೋರುತ್ತದೆ.
ಚಿತ್ತಗಾಂಗ್ ಜಿಲ್ಲೆಯ ಸಾಂಡ್ವಿಪ್ ದ್ವೀಪದ 40 ಕಿ.ಮೀ. ಸನಿಹದಲ್ಲಿದೆ. ಸರ್ಕಾರ ಮನೆಗಳು, ಆಸ್ಪತ್ರೆಗಳು, ಮಸೀದಿಗಳನ್ನು ನಿರ್ಮಿಸಿದೆ. 2017ರಲ್ಲಿಯೇ ಇಲ್ಲಿ 272 ಶತಕೋಟಿ ಡಾಲರ್ ಅಂದಾಜು ವೆಚ್ಚದಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿತ್ತು ಎಂದು ಮಾಧ್ಯಮಗಳು ತಿಳಿಸಿವೆ. ಚೀನಾ, ಬ್ರಿಟನ್ ಕಂಪನಿಗಳು ನಿರ್ಮಾಣ ಕಾರ್ಯ ಕೈಗೊಂಡಿವೆ. ಪ್ರವಾಹ ತಡೆ ಮತ್ತು ಚಂಡಮಾರುತ ರಕ್ಷಣೆಯ ವಾಸಸ್ಥಳ ನಿರ್ಮಾಣವು ನಡೆಯುತ್ತಿದೆ ಎಂದು ರಾಯ್ಟರ್ ವರದಿ ಮಾಡಿದೆ.
ಬಾಂಗ್ಲಾ ದೇಶದ ಪತ್ರಿಕೆ ಡೇಲಿ ಸನ್ ಪ್ರಕಾರ, ಭೂಮಿಯಿಂದ 4 ಮೀಟರ್ ಎತ್ತರದಲ್ಲಿ 1440 ಮನೆಗಳನ್ನು ಕಟ್ಟಲಾಗುತ್ತಿದ್ದು, 1 ಲಕ್ಷ ಜನರಿಗೆ ವಾಸ್ತವ್ಯ ಕಲ್ಪಿಸಲಾಗುತ್ತಿದೆ.
ಸ್ಥಳಾಂತರಗೊಂಡವರು ವ್ಯವಸಾಯ, ಜಾನುವಾರು ಸಾಕಣೆಯಂತಹ ಚಟುವಟಿಕೆಗಳಲ್ಲಿ ತೊಡಗಬಹುದಾದರೂ, ಬಾಂಗ್ಲಾ ಇವರನ್ನು ಅಕೃತವಾಗಿ ನಿರಾಶ್ರಿತರೆಂದು ಮಾನ್ಯ ಮಾಡದ ಕಾರಣ ಹಣದ ವಹಿವಾಟು ನಡೆಸಲು ಅವರಿಗೆ ಸಾಧ್ಯವಾಗದು. 120 ನಿವಾಸಗಳ ಪೈಕಿ 20 ಮನೆಗಳನ್ನು ನಾಗರಿಕ ಆಡಳಿತ, ಕಲಿಕಾ ಕೇಂದ್ರ, ಮಸೀದಿ, ಆರೋಗ್ಯ ಕೇಂದ್ರ, ಅನಾಥಾಲಯಗಳಿಗೆ ಮೀಸಲಿರಿಸಲಾಗಿದೆ.
ದ್ವೀಪದಲ್ಲಿ ಕೆಂಪು ಛಾವಣಿಯ ಬ್ಯಾರಕ್ ತರಹದ ರಚನೆಗಳನ್ನು ಗೂಗಲ್ ಅರ್ಥ್ ತೋರಿಸುತ್ತದೆ. ಹೆಲಿಪ್ಯಾಡ್ ಇದೆ. ಮೀನುಗಾರಿಕೆ ದೋಣಿಗಳು ಕಂಡು ಬರುತ್ತವೆ. ಆದರೆ ದ್ವೀಪದಲ್ಲಿ ಜನವಸತಿ ಇಲ್ಲ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರಿಸ್ಥಿತಿಯ ಕುರಿತ ಮಾಜಿ ವರದಿಗಾರ್ತಿ ಯಾಂಗೀ ಲೀ, 2019ರಲ್ಲಿ ಈ ದ್ವೀಪಕ್ಕೆ ಭೇಟಿ ನೀಡಿದ್ದರೂ, ಅವರು ಈ ಪ್ರದೇಶ ವಾಸಯೋಗ್ಯವೆಂದು ಮಾನವ ಹಕ್ಕುಗಳ ಮಂಡಳಿಗೆ ತಿಳಿಸಿದ್ದಾರೆ ಎಂಬುದು ಖಚಿತವಾಗಿಲ್ಲ. ನಿರಾಶ್ರಿತರ ಒಪ್ಪಿಗೆಯಿಲ್ಲದೆ ಕೈಗೊಂಡಿರುವ ಸ್ಥಳಾಂತರ ಹೊಸ ಬಿಕ್ಕಟ್ಟು ಸೃಷ್ಟಿಸಲಿದೆ ಎಂದು ಅವರು ಹೇಳಿದ್ದಾರೆ.
ಅಸೋಸಿಯೇಟೆಡ್ ಪ್ರೆಸ್ ವರದಿ ಪ್ರಕಾರ ಡಿಸೆಂಬರ್ 4ರಂದು ಭಾಸನ್ ಛಾರ್ಗೆ 1642 ರೋಹಿಂಗ್ಯಾಗಳ ಪ್ರಥಮ ತಂಡ ಆಗಮಿಸಿದೆ. ಅವರನ್ನು ಚಿತ್ತಗಾಂಗ್ನಿಂದ ನೌಕಾ ಹಡಗುಗಳ ಮೂಲಕ ಸ್ಥಳಾಂತರಿಸಲಾಗಿದೆ.
ಸ್ಥಳಾಂತರಿಸುವಾಗ ರೋಹಿಂಗ್ಯಾಗಳ ಒಪ್ಪಿಗೆ ಕೇಳಲಾಗಿಲ್ಲ ಎಂದು ಕೆಲ ಪಾಶ್ಚಿಮಾತ್ಯ ಮಾಧ್ಯಮಗಳು ವರದಿ ಮಾಡಿವೆ. ರೋಹಿಂಗ್ಯಾಗಳು ಉತ್ಸುಕರಾಗಿದ್ದು ಶಾಂತಿಯುತ ಮತ್ತು ಸುರಳೀತವಾಗಿ ಸ್ಥಳಾಂತರ ಕಾರ್ಯ ನಡೆಯಿತೆಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.