ಮುಂದಿನ ವರ್ಷ ನಡೆಯಲಿರುವ ಶೃಂಗಸಭೆಯಲ್ಲಿ ಒಪ್ಪಂದ ಫಿಲಿಪೈನ್ಸ್‍ಗೆ ಭಾರತ ಬ್ರಹ್ಮೋಸ್ ರಫ್ತು

ಹೊಸದಿಲ್ಲಿ: ಇದುವರೆಗೂ ಭಾರತ ವಿದೇಶದಿಂದ ಬಹುತೇಕ ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುತ್ತಿತ್ತು. ಆದರೀಗ ಭಾರತ ಶೀಘ್ರದಲ್ಲೇ ಶಸ್ತ್ರಾಸ್ತ್ರ ರಫ್ತು ಮಾಡುವ ನಿರೀಕ್ಷೆಯಿದ್ದು, ಮುಂದಿನ ವರ್ಷ ನಡೆಯಲಿರುವ ಶೃಂಗಸಭೆಯಲ್ಲಿ ದೇಶಿ ನಿರ್ಮಿತ ಬ್ರಹ್ಮೋಸ್‍ಗಾಗಿ ಭಾರತ- ಫಿಲಿಪೈನ್ಸ್ ನಡುವೆ ಒಪ್ಪಂದವಾಗುವ ಸಾಧ್ಯತೆಯಿದೆ. ಈ ಮೂಲಕ ಭಾರತದಿಂದ ಬ್ರಹ್ಮೋಸ್ ಕ್ಷಿಪಣಿ ಖರೀದಿಸುವ ಮೊದಲ ರಾಷ್ಟ್ರ ಫಿಲಿಪೈನ್ಸ್ ಆಗಲಿದೆ.
ಇದೇ ನಿಟ್ಟಿನಲ್ಲಿ ಹೊಸದಿಲ್ಲಿಯಲ್ಲಿನ ಭಾರತ- ರಷ್ಯಾ ಸಹಭಾಗಿತ್ವದ ಬ್ರಹ್ಮೋಸ್ ಏರೋಸ್ಪೇಸ್ ಸಂಸ್ಥೆಯ ತಂಡವು ಡಿಸೆಂಬರ್‍ನಲ್ಲಿ ಮನಿಲಾಗೆ ಭೇಟಿ ನೀಡಲಿದ್ದು, ಫಿಲಿಫೈನ್ಸ್ ಸೇನೆಯೊಂದಿಗೆ ಒಪ್ಪಂದದ ಬಗ್ಗೆ ಅಂತಿಮ ಮಾತುಕತೆ ನಡೆಸಲಿದೆ ಎಂದು ತಿಳಿದುಬಂದಿದೆ. ರಷ್ಯಾ – ಭಾರತ ಸಹಭಾಗಿತ್ವದಲ್ಲಿ ಬ್ರಹ್ಮೋಸ್ ಅಭಿವೃದ್ಧಿ ಪಡಿಸಲಾಗಿದೆ.
ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಫಿಲಿಪೈನ್ಸ್ ಅಧ್ಯಕ್ಷ ರೋಡ್ರಿಗೊ ಡುಟರ್ಟೆ ಭಾಗಿಯಾಗಲಿದ್ದು, ಸಭೆಯ ದಿನಾಂಕ ಇನ್ನು ನಿಗದಿಯಾಗಿಲ್ಲ. ಆದರೆ ಬಹುತೇಕ ಫೆಬ್ರವರಿಯಲ್ಲೇ ನಡೆಯುವ ನಿರೀಕ್ಷೆಯಿದೆ. ಈ ಒಪ್ಪಂದದೊಂದಿಗೆ ಭಾರತೀಯ ಕೇಂದ್ರ ಔಷಧ ನಿಯಂತ್ರಣ ಸಂಸ್ಥೆ (ಸಿಡಿಎಸ್‍ಸಿಒ) ಹಾಗೂ ಫಿಲಿಪೈನ್ಸ್‍ನ ಔಷಧ ನಿಯಂತ್ರಣ ಮಂಡಳಿ ನಡುವೆ ಒಪ್ಪಂದ, ಮಾಹಿತಿ ತಂತ್ರಜ್ಞಾನ ಕೇತ್ರದಲ್ಲಿ ಸಹಕಾರ ಹೆಚ್ಚಿಸಿಕೊಳ್ಳಲು ಒಪ್ಪಂದ ಹಾಗೂ ವಾಯು ಹಕ್ಕು ಕುರಿತಾದ ಒಪ್ಪಂದಕ್ಕೂ ಉಭಯ ನಾಯಕರು ಸಹಿ ಹಾಕಲಿದ್ದಾರೆ.
ಎಲ್ಲ ಅಂದುಕೊಂಡಂತೆ ಆಗಿದ್ದರೆ, ನವೆಂಬರ್ 6ರಂದು ನಡೆದ ಭಾರತ – ಫಿಲಿಪೈನ್ಸ್ ಜಂಟಿ ಆಯೋಗದ ಸಭಯಲ್ಲಿ ಎರಡು ರಾಷ್ಟ್ರಗಳ ನಡುವೆ ಮಹತ್ವದ ರಕ್ಷಣಾ ಒಪ್ಪಂದಕ್ಕೆ ಆಗಬೇಕಿತ್ತು. ಈ ಒಪ್ಪಂದದಲ್ಲಿ ಬ್ರಹ್ಮೋಸ್ ಖರೀದಿ ಕೂಡ ಒಳಗೊಂಡಿತ್ತು. ಆದರೆ ಸಭೆಯಲ್ಲಿ ಪ್ರಮುಖ ಅಕಾರಿ ಗೈರಾದ ಕಾರಣ, ಒಪ್ಪಂದ ಹಾಗೆ ಉಳಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ