ಬೆಂಗಳೂರು: ಇತರೆ ಹಿಂದುಳಿದ ವರ್ಗಕ್ಕೆ(ಒಬಿಸಿ) ವೀರಶೈವ ಲಿಂಗಾಯತರೂ ಸೇರಿದಂತೆ ಕೆಲ ಉಪಜಾತಿಗಳನ್ನು ಸೇರಿಸುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದ್ದು, 1994ರಲ್ಲಿ ಅಖಿಲ ಭಾರತ ಮಟ್ಟದಲ್ಲಿ ಲಿಂಗಾಯತರನ್ನು ಒಬಿಸಿ ಮಾಡಲು ಮನವಿ ಬಂದಿತ್ತು. ಲಿಂಗಾಯತರಲ್ಲಿನ ಕುರುಬ, ಕುರುಹೀನಶೆಟ್ಟಿ, ಬಿಳಿಜೇಡರು, ಸಿಂಪಿ, ಅಗಸ, ಬಣಗಾರ, ಗೌಳಿ, ಬಳೆಗಾರ, ಜೀರ್ (ಹೂಗಾರ್), ಗಾಣಿಗ, ಕುಂಬಾರ, ಉಪ್ಪಾರ, ಸುಣಗಾರ ಸೇರಿ 16 ಉಪಜಾತಿ ಗುರುತಿಸಲಾಗಿತ್ತು. 1998 ರಲ್ಲಿ ಕೇಂದ್ರ ಸರ್ಕಾರಕ್ಕೆ ವೀರಶೈವ ಮಹಾಸಭಾ ಮತ್ತೊಂದು ಮನವಿ ಸಲ್ಲಿಕೆಯಾಗಿತ್ತು. ಇವುಗಳೊಂದಿಗೆ ಹಲವು ಪ್ರಮುಖ ಉಪಜಾತಿಗಳು ಕೈತಪ್ಪಿ ಹೋಗಿವೆ. ಹೀಗಾಗಿ ಒಬಿಸಿಗೆ ಸೇರಿಸಲು ಕೇಂದ್ರ ಸರ್ಕಾರದ ಪಾಲು ಕೇಳುವ ಬಗ್ಗೆ ಚರ್ಚಿಸಿದ್ದೇವಷ್ಟೇ, ಸದ್ಯಕ್ಕೆ ಸಂಪುಟ ಸಭೆಯ ಮುಂದಿದ್ದ ವಿಷಯ ಮುಂದೂಡಲಾಗಿದೆ ಎಂದರು.
ಮೀಸಲಾತಿಗೂ ರಾಜ್ಯ ಸರ್ಕಾರಕ್ಕೂ ಸಂಬಂಧವಿಲ್ಲ
ಈ ಮೀಸಲಾತಿಗೂ ರಾಜ್ಯ ಸರ್ಕಾರಕ್ಕೂ ಸಂಬಂಧವಿಲ್ಲ. ಯುಪಿಎಸ್ಸಿ ಸೇರಿದಂತೆ ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಮೀಸಲಾತಿ ಕೇಳುವ ಮನವಿಯೇ ಹೊರತು, ರಾಜ್ಯಕ್ಕೆ ಸಂಬಂಸಿದ್ದಲ್ಲ. ಕೇಂದ್ರ ಸರ್ಕಾರಕ್ಕೆ ಇದನ್ನು ಮನವರಿಕೆ ಮಾಡಿಕೊಡಲಾಗಿದೆ. 2ಎ ಗೆ ಸೇರಿಸುವ ಪ್ರಸ್ತಾಪವೂ ಇಲ್ಲ. ಕುಂಚಿಟಿಗರು ಸೇರಿದಂತೆ ಈ ರೀತಿ ಅನೇಕ ಜನಾಂಗವನ್ನು ಕೈಬಿಟ್ಟಿದೆ. ಒಬಿಸಿಗೆ ಸೇರಿಸಲು ಕೇಂದ್ರಕ್ಕೆ ಕೇಳಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.