ಆರ್.ಆರ್.ನಗರ ಮತ್ತು ಶಿರಾ ಕ್ಷೇತ್ರಗಳಲ್ಲಿ ಗೆಲ್ಲಲು ಈಗಾಗಲೇ ತಂತ್ರಗಾರಿಕೆ ಸಿದ್ದವಾಗಿದೆ; ಡಿಕೆ ಶಿವಕುಮಾರ್

ಬೆಂಗಳೂರು: ರಾಜರಾಜೇಶ್ವರಿ ಮತ್ತು ಶಿರಾ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಈಗಾಗಲೇ ತಂತ್ರಗಾರಿಕೆ ಸಿದ್ದವಾಗಿದೆ. ಇದೇ ಅಕ್ಟೋಬರ್ 14ರಂದು ರಾಜರಾಜೇಶ್ವರಿ ನಗರ ಮತ್ತು ಅ. 15ರಂದು ಶಿರಾದಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುತ್ತಾರೆ. ರಾಜರಾಜೇಶ್ವರಿ ಮತ್ತು ಶಿರಾ ಎರಡು ಕಡೆ ಅಭ್ಯರ್ಥಿ ನಾಮಪತ್ರ ಸಲ್ಲಿಸುವಾಗ ನಾನು ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇರುತ್ತೇವೆ. ಎರಡೂ ಕ್ಷೇತ್ರಗಳಲ್ಲಿ ಗೆಲ್ಲಲು ಈಗಾಗಲೇ ತಂತ್ರಗಾರಿಕೆಯನ್ನು ಸಿದ್ಧಪಡಿಸಿದ್ದೇವೆ. ಕೊರೋನಾ ಎಚ್ಚರಿಕೆಯನ್ನು ಇಟ್ಟುಕೊಂಡು ಪ್ರಚಾರ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿರಾ ಹಾಗೂ ಆರ್ ಆರ್ ನಗರ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಆರ್ ಆರ್ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ಕುರಿತಾಗಿ ಮಾತನಾಡಿದ ಡಿಕೆಶಿ, ಕುಸುಮಾ ಅವರು ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಇರಲಿಲ್ಲ. ಬಳಿಕ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡರು. ರಾಜರಾಜೇಶ್ವರಿ ನಗರ ಕ್ಷೇತ್ರದ ಟಿಕೆಟ್ನ್ನು ಕುಸುಮಾ ಅವರಿಗೆ ನೀಡಿದ್ದಕ್ಕೆ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಎಲ್ಲಾ ಆಕಾಂಕ್ಷಿಗಳ ಜೊತೆ ಮಾತನಾಡಿದ್ದೇನೆ. ಉಪಚುನಾವಣೆ ಮಾತ್ರವಲ್ಲ, ಪರಿಷತ್ ಚುನಾವಣೆಗೂ ಅಭ್ಯರ್ಥಿ ಆಯ್ಕೆ ಮಾಡುವಾಗ ನಾನು ಬೆಂಗಳೂರು ಮತ್ತು ಸುತ್ತಮುತ್ತಲಿನ ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದೇನೆ ಎಂದು ಹೇಳಿದರು.

ಇದೇ ವೇಳೆ, ಸಿಬಿಐ ದಾಳಿ ಕುರಿತಾಗಿ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ನಾನು ಭ್ರಷ್ಟನೋ, ಮತ್ತೊಂದು ಎಲ್ಲವೂ ತನಿಖೆ ಬಳಿಕ ಗೊತ್ತಾಗುತ್ತೆ. ಸಿಟಿ ರವಿ ಸೇರಿದಂತೆ ಕೆಲ ಬಿಜೆಪಿಯವರಿಗೆ ನನ್ನ ಹೆಸರು ಹೇಳಿದ್ರೆ ಮಾರ್ಕೆಟ್, ಹೀಗಾಗಿ ಪದೇ ಪದೇ ನನ್ನ ಹೆಸರು ಪ್ರಸ್ತಾಪ ಮಾಡ್ತಾರೆ ಎಂದು ಲೇವಡಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ