ಬೆಂಗಳೂರು: ಐಎಂಎ ಪ್ರಕರಣದಲ್ಲಿ ಗುರುತರ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಮಾಜಿ ಮಂತ್ರಿ ಆರ್. ರೋಷನ್ಬೇಗ್ಗೆ ಮತ್ತಷ್ಟು ಸಂಕಟ ಎದುರಾಗಿದೆ.
ಆರೋಪಿಯನ್ನು ಮೂರು ದಿನ ಸಿಬಿಐ ವಶಕ್ಕೆ ನೀಡಲು ವಿಶೇಷ ನ್ಯಾಯಾಲಯ ಆದೇಶಿಸಿದೆ. ಇದೇ ವೇಳೆ ಪ್ರಕರಣದ ಆರೋಪಿಗಳ ಜೊತೆ ಶಾಮೀಲಾದ ಹೇಮಂತ್ ನಿಂಬಾಳ್ಕರ್ ಹಾಗೂ ಅಜಯ್ ಹಿಲೋರಿ ಅವರಿಗೂ ಸಂಕಷ್ಟ ಎದುರಾಗಿದೆ.
ಕೋಟ್ಯಂತರ ರೂಪಾಯಿಗಳ ಬಹುದೊಡ್ಡ ಹಗರಣ ಇದಾಗಿದ್ದು ಆರೋಪಿಯನ್ನು ತೀವ್ರ ವಿಚಾರಣೆಗೆ ಗುರಿಪಡಿಸುವ ಅಗತ್ಯವಿದೆ . ಆದ್ದರಿಂದ ಸಿಬಿಐ ವಶಕ್ಕೆ ಒಪ್ಪಿ ಸಲು ಆದೇಶಿಸಲು ಸಿಬಿಐ ಪರ ವಕಾಲತ್ತು ವಹಿಸಿದ ವಕೀಲರು ಬುಧವಾರದಂದು ವಿಶೇಷ ನ್ಯಾಯಾಲಯದ ಮುಂದೆ ಮನವಿ ಸಲ್ಲಿಸಿದರು. ಈ ಮನವಿಯನ್ನು ಪುರಸ್ಕರಿಸಿದ ವಿಶೇಷ ನ್ಯಾಯಾಲಯದ ನ್ಯಾಯಾೀಶೆ ಮಂಜುಳಾ ಇಟ್ಟಿ ನ.28ರವರೆಗೆ ಆರೋಪಿಯನ್ನು ಸಿಬಿಐ ವಶಕ್ಕೆ ಒಪ್ಪಿಸಿ ಆದೇಶ ಜಾರಿ ಮಾಡಿದರು.
ನಿಂಬಾಳ್ಕರ್ , ಹಿಲೋರಿಗೂ ಕುಣಿಕೆ !
ಮತ್ತೊಂದೆಡೆ, ಈ ಪ್ರಕರಣದಲ್ಲಿ ಇನ್ನೂ ಕೆಲ ಪ್ರಭಾವಿಗಳ ನೇರ ಪಾತ್ರವಿದೆ ಎನ್ನಲಾಗಿದ್ದು ಹೆಚ್ಚುವರಿ ಪೊಲೀಸ್ ಕಮೀಷನರ್ ( ಆಡಳಿತ) ಆಗಿರುವ ಹೇಮಂತ್ ನಿಂಬಾಳ್ಕರ್ ಹಾಗೂ ಮತ್ತೋರ್ವ ಐಪಿಎಸ್ ಅಕಾರಿ ಅಜಯ್ ಹಿಲೋರಿ ಕೂಡಾ ಸಿಬಿಐ ತನಿಖೆಗೊಳಪಡುವ ದಟ್ಟ ಸಾಧ್ಯತೆಗಳಿವೆ. ಹಿಲೋರಿ ವಿಚಾರಣೆಗೆ ಈಗಾಗಲೇ ಸಿಬಿಐ ಸೂಚಿಸಿದ್ದರೆ , ನಿಂಬಾಳ್ಕರ್ ವಿಚಾರಣೆ ನಡೆಸಿದ ಸಿಬಿಐ ಮಹತ್ವಪೂರ್ಣ ಮಾಹಿತಿಯನ್ನು ಕಲೆಹಾಕಿದೆ.
ಐ ಮಾನಿಟರಿ ಅಡ್ವೈಸರಿ (ಐಎಂಎ) ಸಂಸ್ಥೆಯ ಸ್ಥಾಪಕ ಮನ್ಸೂರ್ ಅಲಿ ಖಾನ್ ತನ್ನ ಸಮೂಹ ಸಂಸ್ಥೆಗಳನ್ನು ಮುಚ್ಚಿ ಪರಾರಿಯಾಗಿದ್ದ ವೇಳೆ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದ ಸಾವಿರಾರು ಜನರು ದೂರು ನೀಡಲು ಬಂದಾಗ ಅಜಯ್ ಹಿಲೋರಿ ಸಾರ್ವಜನಿಕರ ಪರವಾಗಿ ನಿಲ್ಲದೆ ಮನ್ಸೂರ್ ಅಲಿ ಖಾನ್ ಪರ ವರದಿ ನೀಡಿದ್ದರೆಂಬ ಆರೋಪಕ್ಕೆ ಗುರಿಯಾಗಿದ್ದಾರೆ.
ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ ಸಿಬಿಐ, ಮುಂದಿನ ತನಿಖೆಯತ್ತ ಗಮನ ಹರಿಸಿದೆ. ಅಲ್ಲದೆ ನಿಂಬಾಳ್ಕರ್ ಕೂಡ ಐಎಂಎ ಪರವಾಗಿದ್ದರೆಂಬ ಆರೋಪಗಳಿದ್ದು ಇದರ ಸಮಗ್ರ ತನಿಖೆಗೆ ಸಿಬಿಐ ಈಗ ಮುಂದಾಗಿದೆ. ನಿಂಬಾಳ್ಕರ್ ಹಾಗೂ ಹಿಲೋರಿ ಅವರನ್ನು ಸೆಪ್ಟೆಂಬರ್ ತಿಂಗಳಿನಲ್ಲಿಯೇ ಪ್ರಶ್ನಿಸಲಾಗಿತ್ತು. ಮನ್ಸೂರ್ ಮತ್ತು ಬೇಗ್ ಇಬ್ಬರೂ ಶಾಮೀಲಾಗಿ ನಾಡಿನ ಲಕ್ಷಾಂತರ ಮಂದಿ ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ವಂಚನೆ ಎಸಗಿರುವುದು ಸಿಬಿಐ ಪೂರ್ವಭಾವಿ ತನಿಖೆಯಿಂದ ಬೆಳಕಿಗೆ ಬಂದಿದೆ. ಬೇಗ್ ಅವರು ಪ್ರತ್ಯಕ್ಷ, ಪರೋಕ್ಷವಾಗಿ ಗ್ರಾಹಕರು ಹಣ ಹೂಡಲು ತಮ್ಮ ಮಾಲಿಕತ್ವದ ಪತ್ರಿಕೆಯ ಮೂಲಕವೂ ಮನವಿ ಮಾಡಿದ್ದರೆಂಬ ಸಂಗತಿ ಈಗ ಸಿಬಿಐ ತನಿಖೆಯಿಂದ ತಿಳಿದು ಬಂದಿದೆ.