ಬೆಂಗಳೂರು: ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಐದು ದಿನ ಬಾಕಿ ಇದ್ದು, ಘಟಾನುಘಟಿ ನಾಯಕರು ಪ್ರಚಾರ ಕಣಕ್ಕೆ ಧುಮುಕುತ್ತಿದ್ದಾರೆ.
ಈ ಉಪಚುನಾವಣೆಯಿಂದ ವಿಧಾನಸಭೆಯಲ್ಲಿ ಸದಸ್ಯಬಲ ಹೆಚ್ಚಾಗುವುದು ಬಿಟ್ಟರೆ, ಆಡಳಿತ-ಪ್ರತಿಪಕ್ಷಗಳ ಸ್ಥಾನದಲ್ಲಿ ಭಾರೀ ಬದಲಾವಣೆ ಏನೂ ಆಗುವುದಿಲ್ಲ. ಆದರೂ ಎರಡು ಉಪಚುನಾವಣೆಕಣಗಳು ಸಾರ್ವತ್ರಿಕ ಚುನಾವಣೆಗೆ ಕಡಿಮೆ ಇಲ್ಲದಂತೆ ಬಿರುಸುಗೊಳ್ಳುತ್ತಿದ್ದು, ಪ್ರತಿಷ್ಠೆಯ ಕಣವಾಗಿ ಮಾರ್ಪಾಡಾಗಿದೆ.
ರಾಜಕೀಯ ಪಕ್ಷಗಳ ನಾಯಕರು ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಮಧ್ಯೆ ಪೆರೇಡ್ ನಡೆಸುತ್ತಿದ್ದು, ಪರಸ್ಪರ ಗೊಂದಲ ಆಗದಂತೆ, ಪ್ರತ್ಯೇಕ ಸಮಯದಲ್ಲಿ ನಾಯಕರು ಕ್ಷೇತ್ರ ಸಂಚಾರ ನಡೆಸುತ್ತಿದ್ದಾರೆ.
ಬುಧವಾರವಷ್ಟೇ ಆರ್.ಆರ್. ನಗರ ಕ್ಷೇತ್ರವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಪ್ರಚಾರ ನಡೆಸಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಗುರುವಾರದಂದು ಶಿರಾ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಬೆಂಬಲಿಸಿ ಪ್ರಚಾರ ನಡೆಸಿದರು.
ಮೊದಲೂರು, ಶಿರಾ ಪಟ್ಟಣದಲ್ಲಿ ಸಿಎಂ ಪ್ರಚಾರ
ಇದೀಗ ಅ.30ರ ಶುಕ್ರವಾರದಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಿರಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ಗೌಡ ಪರ ಪ್ರಚಾರ ನಡೆಸಲಿದ್ದಾರೆ. ಬೆಳಗ್ಗೆ 9.30 ಕ್ಕೆ ಬೆಂಗಳೂರಿನಿಂದ ಕಾರಿನ ಮೂಲಕ ಹೊರಟು ಬೆಳಗ್ಗೆ 11 ಗಂಟೆಗೆ ಶಿರಾದ ಮೊದಲೂರಿಗೆ ತಲುಪಲಿದ್ದಾರೆ. ಬಿಜೆಪಿ ವತಿಯಿಂದ ಆಯೋಜಿಸಿರುವ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಮಧ್ಯಾಹ್ನ 2.30ಕ್ಕೆ ಶಿರಾ ಪಟ್ಟಣದಲ್ಲಿ ನಡೆಯಲಿರುವ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ 6.30 ಕ್ಕೆ ಬೆಂಗಳೂರಿಗೆ ಮರಳಲಿದ್ದಾರೆ.
ಇತ್ತ ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ನಟ ದರ್ಶನ್ ಅವರೂ ಪ್ರಚಾರ ನಡೆಸಲಿದ್ದಾರೆ.