ಹೊಸದಿಲ್ಲಿ: ಅಮೆರಿಕ – ಭಾರತ ನಡುವಿನ ಮಹತ್ವದ 2 + 2 ಸಭೆಗಾಗಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಹಾಗೂ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ ಎಸ್ಪರ್ ಭಾರತ ಆಗಮಿಸಿದ್ದು, ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರೊಂದಿಗೆ ಸೋಮವಾರ ಮಾತುಕತೆ ನಡೆಸಿದ್ದಾರೆ.
ಎರಡು ರಾಷ್ಟ್ರಗಳ ಮಿಲಿಟರಿ ಬಾಂಧವ್ಯ ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಸಭೆ ನಡೆಸಲಾಗುತ್ತಿದ್ದು, ಮಂಗಳವಾರ ಸಭೆ ನಡೆಯಲಿದೆ. ಈ ವೇಳೆ ರಕ್ಷಣೆ, ಭದ್ರತೆ ಹಾಗೂ ಇಂಡೋ – ಪೆಸಿಫಿಕ್ ವಲಯದಲ್ಲಿ ಪರಸ್ಪರ ಸಹಕಾರ ಹೆಚ್ಚಿಸಿಕೊಳ್ಳುವ ಕುರಿತು ಅಕಾರಿಗಳು ಚರ್ಚಿಸಲಿದ್ದಾರೆ.
ಲಡಾಖ್ ಗಡಿಯಲ್ಲಿ ಚೀನಾ ಬಿಕ್ಕಟ್ಟು ಸೃಷ್ಟಿಸಿರುವ ನಡುವೆ ಸಭೆ ನಡೆಯುತ್ತಿರುವುದು ಸಹಜವಾಗಿಯೇ ಮಹತ್ವ ಪಡೆಯುತ್ತದೆ. ಅಲ್ಲದೇ ಸಭೆಯಲ್ಲಿ ಎರಡು ರಾಷ್ಟ್ರಗಳ ಸೇನಾ ಪಡೆಗೆ ಅನುಕೂಲವಾಗುವ ಮೂಲ ವಿನಿಮಯ ಮತ್ತು ಸಹಕಾರ ಒಪ್ಪಂದಕ್ಕೂ ಸಹಿ ಹಾಕುವ ನಿರೀಕ್ಷೆಯಿದೆ. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭಾಗಿಯಾಗುತ್ತಿದ್ದಾರೆ.