ನವದೆಹಲಿ, ಜು.8-ಉತ್ತರ ಪ್ರದೇಶದ ಅಯೋಧ್ಯೆಯಲ್ಲಿನ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದದ ಮೂಲ ತಕರಾರು ಅರ್ಜಿದಾರರಲ್ಲಿ ಒಬ್ಬರು ಈ ವ್ಯಾಜ್ಯದ ತ್ವರಿತ ವಿಚಾರಣೆ ನಡೆಸುವಂತೆ ಕೋರಿ ಇಂದು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಈ ಸಂಬಂಧ ಗೋಪಾಲ್ ಸಿಂಗ್ ವಿಶಾರದ್ ಸುಪ್ರೀಂಕೋರ್ಟ್ಗೆ ಮನವಿ ಮಾಡಿ, ಆಯೋಧ್ಯೆ ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥಗೊಳಿಸಲು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಫ್.ಎಂ.ಐ. ಖಲಿಫುಲ್ಲಾ ನೇತೃತ್ವದಲ್ಲಿ ರಚಿಸಲಾದ ತ್ರಿ ಸದಸ್ಯರ ಮಧ್ಯಸ್ಥಿಕೆ ಸಂಧಾನಕಾರರ ಸಮಿತಿ ಈ ಪ್ರಕರಣದಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠಕ್ಕೆ ಅರ್ಜಿದಾರರ ಪರ ಹಿರಿಯ ವಕೀಲ ಪಿ.ಎಸ್.ನರಸಿಂಹ ಈ ವಿವಾದವನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಶೀಘ್ರ ವಿಚಾರಣೆ ನಡೆಸುವಂತೆ ಕೋರಿದರು.
ತುರ್ತು ವಿಚಾರಣೆ ಆರಂಭಕ್ಕೆ ನೀವು ಅರ್ಜಿ ಸಲ್ಲಿಸಿರುವಿರಾ ಎಂದು ಪೀಠವು ವಕೀಲರನ್ನು ಪ್ರಶ್ನಿಸಿತು. ಹೌದು ಈ ಬಗ್ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಅವರು ಸಕರಾತ್ಮಕ ಉತ್ತರ ನೀಡಿದರು.