ಬೆಳಗಾವಿ: ನಿಗದಿಯಂತೆ ಸಚಿವ ಸಂಪುಟ ವಿಸ್ತರಣೆ ಡಿ.22ಕ್ಕೆ ಆಗುವುದು ಗ್ಯಾರಂಟಿ. ಈ ಬಗ್ಗೆ ಯಾರಿಗೂ ಅನುಮಾನ ಬೇಡ. ಜೊತೆಗೆ ಅಂದೇ ನಿಗಮ, ಮಂಡಳಿಗೂ ಅಧ್ಯಕ್ಷರ ನೇಮಕ ನಡೆಯಲಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಧನುರ್ಮಾಸ ಇರುವ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ನಡೆಯುವುದಿಲ್ಲ ಎನ್ನುವ ಕಾಂಗ್ರೆಸ್ ನಾಯಕರ ಭವಿಷ್ಯ ನಿಜವಾಗುವುದಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಿದರು.
ಮಂಗಳವಾರ ಬೆಳಗಾವಿಯ ಸುವರ್ಣ ಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಸಭೆಯಲ್ಲಿ ನಿಗಮ ಮಂಡಳಿಗಳಿಗೆ ಶಾಸಕರ ಜೊತೆ ವಿಧಾನ ಪರಿಷತ್ ಸದಸ್ಯರನ್ನು ಪರಿಗಣಿಸುವಂತೆ ಇದೇ ವೇಳೆ ಸದಸ್ಯರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು ಮೊದಲ ಹಂತದಲ್ಲಿ 20 ಶಾಸಕರಿಗೆ ಅವಕಾಶ ನೀಡಲಾಗುವುದು. ಎರಡನೇ ಹಂತದಲ್ಲಿ ಪರಿಷತ್ ಸದಸ್ಯರ ಪರಿಗಣಿಸುವ ಕುರಿತು ಯೋಚಿಸಲಾಗುವುದು ಎಂಬ ಭರವಸೆ ನೀಡಿದರು.
ಚೀಫ್ ವಿಪ್ ಹಾಗೂ ಉಪ ಸಭಾಪತಿ ಸ್ಥಾನವನ್ನು ಜೆಡಿಎಸ್ಗೆ ಬಿಟ್ಟು ಕೊಡುವ ವಿಚಾರ ಕುರಿತು ಸಿದ್ದರಾಮಯ್ಯ ಪ್ರಸ್ತಾಪಿಸುತ್ತಿದ್ದಂತೆ ಪರಿಷತ್ ಸದಸ್ಯರು ಬಹಿರಂಗವಾಗಿ ಅತೃಪ್ತಿ ವ್ಯಕ್ತಪಡಿಸಿದರು. ವರ್ಗಾವಣೆ, ಸ್ಥಳೀಯ ಸಂಸ್ಥೆಗಳ ನಾಮ ನಿರ್ದೇಶನ, ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಅನುದಾನ ವಿಚಾರದಲ್ಲಿ ನಮಗೆ ಅನ್ಯಾಯವಾಗುತ್ತಿದೆ. ಮೈತ್ರಿ ಸರ್ಕಾರದಲ್ಲಿ ನಮ್ಮ ಸಂಖ್ಯೆ ಅಧಿಕವಿದ್ದರೂ ನಮಗೆ ಧ್ವನಿ ಇಲ್ಲದಂತೆ ಆಗಿದೆ. ಜೆಡಿಎಸ್ ಶಾಸಕರಿಗೆ ಇರುವ ಬೆಲೆ ನಮಗಿಲ್ಲ ಎಂಬುದಕ್ಕೆ ಶಾಸಕರು ಒಕ್ಕೊರಲಿನಿಂದ ದೂರಿದರು. ಅಲ್ಲದೇ ಈ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲಿಯೂ ಚರ್ಚಿಸುವಂತೆ ಒತ್ತಾಯಿಸಿದರು.
ಮೈತ್ರಿ ಸರ್ಕಾರದಲ್ಲಿ ಉ.ಕ ಭಾಗದ ಕಡೆಗಣನೆ ಬಗ್ಗೆ ಕೂಡ ಶಾಸಕರು ಧ್ವನಿ ಎತ್ತಿದ್ದರು. ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕದ ಶಾಸಕರನ್ನು ಪರಿಗಣಿಸಿಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ. ಉ.ಕ ಗೆ ಹೆಚ್ಚಿನ ಮಾನ್ಯತೆ ನೀಡಬೇಕು . ಸಂಪುಟ ವಿಸ್ತರಣೆಯಲ್ಲಿ ಉ.ಕರ್ನಾಟಕ ಪರಿಗಣಿಸಿ, 6 ಸ್ಥಾನಗಳನ್ನು ಉತ್ತರ ಕರ್ನಾಟಕ ಶಾಸಕರಿಗೆ ಕೊಡಿ ಎಂದು ಒತ್ತಾಯಿಸಿದರು.
ಸಭೆಯಿಂದ ದೂರ ಉಳಿದ ಅಸಮಾಧಾನಿತರು
ಪಕ್ಷದಲ್ಲಿ ಆಂತರಿಕ ಬಂಡಾಯದ ಬಿಸಿ ನಿಂತಿಲ್ಲ ಎಂಬುದಕ್ಕೆ ಇಂದು ನಡೆದ ಸಿಎಲ್ಪಿ ಸಭೆ ಸಾಕ್ಷಿಯಾಯಿತು. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರಮೇಶ್ ಜಾರಕಿಹೊಳಿ ಅನಾರೋಗ್ಯದ ನೆಪವೊಡ್ಡಿ ಸಭೆಯಿಂದ ಹೊರಗುಳಿಯುವ ಮೂಲಕ ಮತ್ತೊಮ್ಮೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಮಂತ್ರಿ ಸ್ಥಾನಕ್ಕೆ ಒತ್ತಾಯಿಸುತ್ತಿರುವ ಹಿರಿಯ ನಾಯಕ ರಾಮಲಿಂಗಾರೆಡ್ಡಿ, ಎಂಬಿ ಪಾಟೀಲ್ ರೋಷನ್ ಬೇಗ್, ಸುಧಾಕರ್, ಬಿ ನಾಗೇಂದ್ರ ಸೇರಿ ಇತರರು ಸಭೆಯಿಂದ ದೂರ ಉಳಿದರು.
ಆರ್ಧಕರ್ಧ ಶಾಸಕರು ಗೈರು
ವಿಧಾನ ಸಭೆ ಹಾಗೂ ಪರಿಷತ್ ಸೇರಿದಂತೆ ಕಾಂಗ್ರೆಸ್ನ 119 ಶಾಸಕರು ಸಭೆಗೆ ಹಾಜರಿರಬೇಕು ಎಂದು ಸಿದ್ದರಾಮಯ್ಯ ಸುತ್ತೋಲೆ ಹೊರಡಿಸಿದರೂ ಅರ್ಧಕರ್ಧದಷ್ಟು ಶಾಸಕರು ಸಭೆಗೆ ಗೈರಾಗುವ ಮೂಲಕ ಸರ್ಕಾರದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಸಭೆಯಲ್ಲಿ 55 ಶಾಸಕರು ಹಾಜರಾಗಿದ್ದರು.
ಇನ್ನು ಸಿಎಲ್ಪಿ ಸಭೆಗೆ ಮೊದಲು ವಿಶೇಷ ಆಹ್ವಾನಿತರಾಗಿ ಸಿಎಂ ಕುಮಾರಸ್ವಾಮಿ ಹೋಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಅವರಿಗೆ ಆಹ್ವಾನ ನೀಡಲಾಗಲಿಲ್ಲ. ಸಭೆ ಮುಗಿದ ಬಳಿಕ ಪ್ರತಿಕ್ರಿಯಿ ನೀಡಿರುವ ಸಿಎಂ ಕುಮಾರಸ್ವಾಮಿ ಅವರು, ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ನವರು ಯಾವಾಗ ಹೇಳ್ತಾರೋ ಆವಾಗ ನಾವು ಸಿದ್ದರಿದ್ದೇವೆ. ಈಗಾಗಲೇ ಸಿದ್ದರಾಮಯ್ಯ ಅವರು 22 ರಂದು ಸಂಪುಟ ವಿಸ್ತರಣೆ ಎಂದಿದ್ದಾರೆ. ಅಂದೇ ಮಾಡಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.