ರಾಜೀನಾಮೆ ಹಿಂಪಡೆದರೆ ಮಂತ್ರಿ ಪದವಿ, ಇಲ್ಲದಿದ್ದರೆ ಅನರ್ಹ ಶಿಕ್ಷೆ ಖಚಿತ; ಅತೃಪ್ತರಿಗೆ ಕೊನೇ ಅವಕಾಶ ನೀಡಿದ ಸಿಎಲ್ ಪಿ ನಾಯಕ ಸಿದ್ದರಾಮಯ್ಯ

ಬೆಂಗಳೂರುಮೈತ್ರಿ ಸರ್ಕಾರ ಉಳಿಸಿಕೊಳ್ಳಲೇಬೇಕು ಎಂದು ಒದ್ದಾಡುತ್ತಿರುವ ಕಾಂಗ್ರೆಸ್​ ನಾಯಕರು ಇಂದು ನಡೆದ ಕಾಂಗ್ರೆಸ್​ ಶಾಸಕಾಂಗ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. ರಾಜೀನಾಮೆ ನೀಡಿರುವ ಶಾಸಕರಿಗೆ ಕೊನೆಯ ಅವಕಾಶ ನೀಡಿರುವ ಮುಖಂಡರು, ಒಂದು ವೇಳೆ ಅವರು ರಾಜೀನಾಮೆ ವಾಪಸ್ ಪಡೆಯದಿದ್ದರೆ ಅನರ್ಹಗೊಳಿಸುವಂತೆ ಸ್ಪೀಕರ್​ಗೆ ಮನವಿ ಸಲ್ಲಿಸುವುದಾಗಿ ಸಿಎಲ್​ಪಿ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. 

ಸಿಎಲ್​ಪಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಜಾಪ್ರಭುತ್ವ ವಿರೋಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಕರ್ನಾಟಕದ ಸರ್ಕಾರವನ್ನು ಬೀಳಿಸಲು ಅಮಿತ್ ಶಾ, ನರೇಂದ್ರ ಮೋದಿ ಅವರ ಕೈವಾಡವಿದೆ. ಶಾಸಕರಿಗೆ ಹಣ, ಮಂತ್ರಿ ಪದವಿ ಆಸೆ ತೋರಿಸಿ, ಅವರನ್ನು ಸೆಳೆದುಕೊಳ್ಳಲಾಗುತ್ತಿದೆ. ಕೋಟ್ಯಂತರ ರೂ. ಕೊಡಲು ಅವರಿಗೆ ಹಣ ಎಲ್ಲಿಂದ ಬಂತು. ಅಕ್ರಮದ ಹಣವನ್ನು ಅವರು ನಮ್ಮ ಶಾಸಕರಿಗೆ ಹಂಚುತ್ತಿದ್ದಾರೆ ಎಂದು ಆರೋಪಿಸಿದರು.

ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಾರಣಕ್ಕೆ ಅವರಿಗೆ ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನ ನೀಡಿದರು. ಆನಂತರ ನ್ಯಾಯಾಲಯದ ಮೊರೆ ಹೋದಾಗ ಸದನದಲ್ಲಿ ಬಿಜೆಪಿ ಬಹುಮತ ಸಾಬೀತಿಗೆ ಕೋರ್ಟ್​ ಆದೇಶ ನೀಡಿತು. ಆದರೆ, ಯಡಿಯೂರಪ್ಪ ಬಹುಮತ ಸಾಬೀತು ಪಡಿಸಲು ಸಾಧ್ಯವಾಗದೆ, ಸೋತು ಹೋದರು. ಆನಂತರ ನಾವು, ಕಾನೂನುಬದ್ಧವಾಗಿ, ಸಂವಿಧಾನಬದ್ಧವಾಗಿ ಮೈತ್ರಿ ಸರ್ಕಾರ ರಚಿಸಿದ್ದೇವೆ. ಬಿಜೆಪಿ ಸರ್ಕಾರ ನಡೆಸಲು 2018ರಲ್ಲಿ ಜನರು ಸ್ಪಷ್ಟ ಸಂದೇಶ ನೀಡಿಲ್ಲ. ನಾವು ಸಂವಿಧಾನಬದ್ಧವಾಗಿ, ಮತಗಳ ಶೇಕಡಾವಾರು ಅಂಕಿ-ಸಂಖ್ಯೆಯ ಮೇಲೆ ನಾವು ಸರ್ಕಾರ ರಚಿಸಿದ್ದೇವೆ ಎಂದು ಪುನರುಚ್ಚರಿಸಿದರು.

ರಾಜೀನಾಮೆ ನೀಡಿರುವ ಶಾಸಕರನ್ನು ಪಕ್ಷಾಂತರ ಕಾಯ್ದೆಯಡಿ ಅನರ್ಹಗೊಳಿಸುವಂತೆ ಸ್ಪೀಕರ್​ ಅವರಿಗೆ ಮನವಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.. ನಾವು ಈಗಲೂ ಶಾಸಕರಿಗೆ ಮನವಿ ಮಾಡುತ್ತಿದ್ದೇವೆ. ವಾಪಸ್ ಬಂದು ತಮ್ಮ ರಾಜೀನಾಮೆಯನ್ನು ವಾಪಸ್ ಪಡೆದುಕೊಳ್ಳಿ. ಆಗ ಪಕ್ಷದಿಂದ ನಿಮ್ಮ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಒಂದು ವೇಳೆ ನೀವು ರಾಜೀನಾಮೆ ಹಿಂಪಡೆಯದಿದ್ದರೆ ಅನರ್ಹಗೊಳಿಸುವಂತೆ ಮನವಿ ಮಾಡುವುದು ಖಚಿತ. ಪಕ್ಷಾಂತರ ಕಾಯ್ದೆಯಡಿ ನೀವು ಒಮ್ಮೆ ಅನರ್ಹಗೊಂಡರೆ ಆರು ವರ್ಷಗಳ ಕಾಲ ಯಾವುದೇ ಚುನಾವಣೆಗೆ ನಿಲ್ಲುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿಯ ಷಡ್ಯಂತ್ರ ವಿರೋಧಿಸಿ ಮಹಾತ್ಮ ಗಾಂಧಿ ಪ್ರತಿಮೆ ಎದುರು ಒಂದು ಗಂಟೆಗಳ ಕಾಲ ಕಾಂಗ್ರೆಸ್ ಶಾಸಕರು ಧರಣಿ ನಡೆಸಲಿದ್ದೇವೆ. ಆನಂತರ ನೇರವಾಗಿ ಸ್ಪೀಕರ್ ಬಳಿ ತೆರಳಿ ನಮ್ಮ ಮನವಿ ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.

ಪಕ್ಷದ ಒಗ್ಗಟ್ಟನ್ನು ಕಾಪಾಡುವ ಸಲುವಾಗಿ ಉಪಮುಖ್ಯಮಂತ್ರಿಯಿಂದ ಹಿಡಿದು ಎಲ್ಲ 21 ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಪ್ಪನ್ನು ತಿದ್ದಿಕೊಂಡು, ಸ್ವಯಂಪ್ರೇರಣೆಯಿಂದ ವಾಪಸ್​ ಮರಳಿದರೆ ಅವರಿಗೆ ಪಕ್ಷ ಎಲ್ಲವನ್ನೂ ಕಲ್ಪಿಸಿಕೊಡಲಿದೆ. ಇಲ್ಲದಿದ್ದಲ್ಲಿ ಕಠಿಣ ಕ್ರಮ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ