ಸಿಎಲ್​ಪಿ ಸಭೆ ಆರಂಭ; ಸೌಮ್ಯಾ ರೆಡ್ಡಿ ಹಾಜರ್, ಅನುಮತಿ ಪಡೆಯದೆ ಸಭೆಗೆ ಗೈರಾದ ಅಂಜಲಿ ನಿಂಬಾಳ್ಕರ್​!

ಬೆಂಗಳೂರುಮೈತ್ರಿ ಸರ್ಕಾರದ ಅಸ್ತಿತ್ವ ವಿಚಾರ ಮಹತ್ವದ ಘಟ್ಟಕ್ಕೆ ಬಂದು ತಲುಪಿದೆ. ಸರ್ಕಾರವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಮೈತ್ರಿ ನಾಯಕರು ಮೂರು ದಿನಗಳಿಂದ ಸಕಲ ಸರ್ಕಸ್​ ನಡೆಸುತ್ತಿದ್ದಾರೆ. ಜೆಡಿಎಸ್​ ಪಕ್ಷ ನೆನ್ನೆ ಸಭೆ ನಡೆಸಿ, ಶಾಸಕರನ್ನು ರೆಸಾರ್ಟ್​ಗೆ ಸ್ಥಳಾಂತರ ಮಾಡಿದೆ.

ಇನ್ನು ಕಾಂಗ್ರೆಸ್​ ಇಂದು ಶಾಸಕಾಂಗ ಸಭೆ ನಡೆಸುತ್ತಿದ್ದು, ಮತ್ತಷ್ಟು ಅತೃಪ್ತ ಶಾಸಕರು ಸಭೆಗೆ ಗೈರಾಗುವ ಮುಖಂಡರಿಗೆ ಶಾಕ್ ನೀಡಿದ್ದಾರೆ.

ಸಿಎಲ್​ಪಿ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕೂಡ ಭಾಗಿಯಾಗಿದ್ದಾರೆ. ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಉಳಿದ ಅತೃಪ್ತರು ರಾಜೀನಾಮೆ ನೀಡದಂತೆ ತಡೆಗಟ್ಟಲೇಬೇಕಾದ ಅನಿವಾರ್ಯತೆ ಕೈ ಮುಖಂಡರಿಗಿದೆ. ಆದರೆ, ಸಭೆಗೆ ಇನ್ನು ಹಲವು ಶಾಸಕರು ಗೈರಾಗುವ ಮೂಲಕ ಮತ್ತಷ್ಟು ಆತಂಕ ಸೃಷ್ಟಿಸಿದ್ದಾರೆ. ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದ್ದ ರಾಮಲಿಂಗಾರೆಡ್ಡಿ ಅವರ ಮಗಳು ಸೌಮ್ಯಾ ರೆಡ್ಡಿ ಸಭೆಗೆ ಹಾಜರಾಗಿದ್ದಾರೆ.

ಚಿಕ್ಕಬಳ್ಳಾಪುರ ಶಾಸಕ ಕೆ.ಸುಧಾಕರ್, ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್,  ಹೊಸಕೋಟೆಯ ಎಂಟಿಬಿ ನಾಗರಾಜ್, ಶಿವಾಜಿ ನಗರ ಶಾಸಕ ರೋಷನ್ ಬೇಗ್, ಬಿಟಿಎಂ ಲೇಔಟ್​ ಶಾಸಕ ರಾಮಲಿಂಗಾ ರೆಡ್ಡಿ, ವಿಜಯನಗರದ ಆನಂದ್​ ಸಿಂಗ್, ಶೃಂಗೇರಿಯ ರಾಜೇಗೌಡ, ಇ.ತುಕಾರಾಂ ಸಭೆಗೆ ಗೈರಾಗಿದ್ದಾರೆ.

ಗೈರಾದವರಲ್ಲಿ ಡಾ. ಸುಧಾಕರ್, ತುಕಾರಾಮ್, ಎಂಟಿಬಿ ನಾಗರಾಜ್​ ಅವರು ವೈರಲ್ ಫಿವರ್​ನಿಂದ ಬಳಲುತ್ತಿದ್ದು, ಸಭೆಗೆ ಗೈರಾಗುವುದಾಗಿ ಮೊದಲೇ ಮಾಹಿತಿ ನೀಡಿದ್ದಾರೆ. ಇನ್ನು ಶೃಂಗೇರಿಯ ರಾಜೇಗೌಡ ಅವರು ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ರೋಷನ್​ ಬೇಗ್​ ಅವರನ್ನು ಪಕ್ಷ ಈಗಾಗಲೇ ಅಮಾನತು ಮಾಡಿದೆ. ಹಾಗೆ ನೋಡಿದರೆ, ಅನುಮತಿ ಪಡೆಯದೇ ಗೈರಾದ ಶಾಸಕರು ಎಂದರೆ ಅದು ಅಂಜಲಿ ನಿಂಬಾಳ್ಕರ್​ ಅವರೊಬ್ಬರೇ ಮಾತ್ರ.

ಇಷ್ಟೆಲ್ಲಾ ರಾದ್ಧಾಂತಗಳ ನಡುವೆ ಸರ್ಕಾರ ನಡೆಸುವುದು ಬೇಡ. ಇಲ್ಲಿಗೆ ಸಾಕು. ವಿರೋಧ ಪಕ್ಷದಲ್ಲಿ ಕುರೋಣ. ಆಗ ಪಕ್ಷ ಸಂಘಟನೆ ಮಾಡಬಹುದು. ಚುನಾವಣೆಗೆ ಸಿದ್ದವಾಗಲು ಅನುಕೂಲ ಆಗುತ್ತದೆ ಎಂದು ಸಭೆಯಲ್ಲಿ ಶಾಸಕರು ಒಕ್ಕೊರಲಿನಿಂದ ಒತ್ತಾಯ ಮಾಡಿದ್ದಾರೆ. ಅಲ್ಲದೇ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋದವರನ್ನು ಅಮಾನತು ಮಾಡಿ ಎಂಬ ಕೂಗು ಕೂಡ ಸಭೆಯಲ್ಲಿ ಕೇಳಿಬಂದಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ