ಬೆಂಗಳೂರು:ಮೇ-1: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಜಕೀಯ ಪಕ್ಷಗಳಿಂದ ಮತದಾರರ ಮನವೊಲಿಕೆಗೆ ಭಾರೀ ಕಸರತ್ತು ನಡೆಯುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿ ಪರ ಪ್ರಚಾರ ನಡೆಸಲು ಇಂದು ರಾಜ್ಯಕ್ಕೆ ಪ್ರಧಾನಿ ನರೇಂದ ಮೋದಿ ಆಗಮಿಸಲಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆ ಅಧಿಸೂಚಣೆ ಹೊರಬಿದ್ದ ಬಳಿಕ ಪ್ರಚಾರಾರ್ಥವಾಗಿ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಮೋದಿಯವರು ಆಗಮಿಸುತ್ತಿದ್ದು, ಚಾಮರಾಜನಗರ, ಉಡುಪಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಪ್ರಚಾರ ಕಾರ್ಯಗಳನ್ನು ಆರಂಭಿಸುತ್ತಿದ್ದಾರೆ.
ರಾಜ್ಯದ ವಿವಿಧೆಡೆಗಳಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳಲಿರುವ ಪ್ರಧಾನಿ ಮೋದಿಯವರು ಮೇ.1,3,5, 7 ಮತ್ತು ಮೇ.8 ರಂದು ರಾಜ್ಯದಲ್ಲಿ ಮತದಾರ ಮನಗೆಲ್ಲಲಿದ್ದಾರೆ. 5 ದಿನಗಳಲ್ಲಿ ಒಟ್ಟಾರೆ 15 ರ್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ.
ಈ ನಡುವೆ ಪ್ರಚಾರಕ್ಕಾಗಿ ರಾಜ್ಯಕ್ಕೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿಗೆ ಸ್ವಾಗತ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಜತೆಗೆ, ‘#answerMaadiModi’ ಎಂಬ ಹ್ಯಾಷ್ಟ್ಯಾಗ್ ನಡಿ ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಕಾಲೆಳೆದಿದ್ದಾರೆ.
‘ಪ್ರಿಯ ಮೋದಿ ಅವರೇ, ನೀವು ಕರ್ನಾಟಕಕ್ಕೆ ಬರುತ್ತಿದ್ದೀರಿ ಎಂಬ ಸುದ್ದಿ ಕೇಳಿದೆ. ನಮ್ಮ ರಾಜ್ಯಕ್ಕೆ ನಿಮಗೆ ಸುಸ್ವಾಗತ. ನೀವು ಇಲ್ಲಿಗೆ ಬಂದಾಗ ಕೆಲವು ವಿಚಾರಗಳ ಬಗ್ಗೆ ನಿಲುವು ಸ್ಪಷ್ಟಪಡಿಸಬೇಕು ಎಂದು ಕನ್ನಡಿಗರು ಬಯಸುತ್ತಿದ್ದಾರೆ. ದಯವಿಟ್ಟು ಉತ್ತರಿಸಿ’ ಎಂದು ಕೋರಿದ್ದಾರೆ.
ಐದು ದಿನಗಳ ಕಾಲ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿ ಮತಯಾಚನೆ ಮಾಡಲಿರುವ ಪ್ರಧಾನಿ ಮೋದಿ ರಾಜ್ಯದಲ್ಲಿ ಯಾವರೀತು ಸುನಾಮಿ ಎಬ್ಬಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
Karnataka assembly election,BJP,PM Narendra Modi,campaign