ಮಮತಾ ಬ್ಯಾನರ್ಜಿ ತಿದ್ದಿದ್ದ ಫೋಟೋ ವಿವಾದ: ಬಿಜೆಪಿ ಯುವ ಮೋರ್ಚಾ ನಾಯಕಿಗೆ ಷರತ್ತು ಬದ್ಧ ಜಾಮೀನು

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಫೋಟೋವನ್ನು ತಿದ್ದಿ ವಿವಾದಾತ್ಮಕವಾಗಿ ಪ್ರಕಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಬಿಜೆಪಿ ಯುವ ಮೋರ್ಚಾ ನಾಯಕಿ ಪ್ರಿಯಾಂಕಾ ಶರ್ಮಾ ಅವರಿಗೆ ಸುಪ್ರೀಂ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

ನ್ಯಾಯಾಂಗ ಬಂಧನದಿಂದ ಬಿಡುಗಡೆಯಾದ ಬಳಿಕ ಪ್ರಿಯಾಂಕಾ ಶರ್ಮಾ ಅವರು ಲಿಖಿತವಾಗಿ ತೃಣಮೂಲ ನಾಯಕಿಯ ಕ್ಷಮೆ ಯಾಚಿಸಬೇಕು ಎಂದು ಕೋರ್ಟ್ ಸೂಚಿಸಿದೆ.

ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟಿನ ರಜಾಕಾಲದ ಪೀಠ ಪ್ರಕರಣದ ವಿಚಾರಣೆ ನಡೆಸಿದ ಬಳಿಕ ‘ನಾವು ಜಾಮೀನು ಮಂಜೂರು ಮಾಡಬಹುದು; ಆದರೆ ಆಕೆ ಕ್ಷಮೆ ಯಾಚಿಸಬೇಕು’ ಎಂದು ಸೂಚಿಸಿತು.

ಮಮತಾ ಬ್ಯಾನರ್ಜಿ ಅವರ ತಿದ್ದಿದ ಚಿತ್ರವೊಂದನ್ನು ಶೇರ್ ಮಾಡಿಕೊಂಡ ಆರೋಪದಲ್ಲಿ ಪಶ್ಚಿಮ ಬಂಗಾಳ ಪೊಲೀಸರು ಪ್ರಿಯಾಂಕಾ ಶರ್ಮಾ ಅವರನ್ನು ಬಂಧಿಸಿದ್ದರು. ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಎತ್ತಿಕೊಂಡಿತ್ತು.

ತಮ್ಮ ಕಕ್ಷಿದಾರರು ಆ ಚಿತ್ರವನ್ನು ಸೃಷ್ಟಿಸಿಲ್ಲ, ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಹರಿದಾಡುತ್ತಿರುವ ಆ ಚಿತ್ರವನ್ನು ಅವರು ಕೇವಲ ಹಂಚಿಕೊಂಡಿದ್ದಾರೆ ಅಷ್ಟೆ ಎಂದು ವಕೀಲರು ಕೋರ್ಟಿನಲ್ಲಿ ವಾದಿಸಿದರು.

mamata banerjee,BJP,priyanka sharma,

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ