ಚೀನಾದ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಸೆಡ್ಡು: ಆಸ್ಚ್ರೇಲಿಯಾ, ಅಮೆರಿಕ, ಜಪಾನ್ ಸಹಭಾಗಿತ್ವದಲ್ಲಿ ಭಾರತದಿಂದ ಪರ್ಯಾಯ ಯೋಜನೆ

ನವದೆಹಲಿ:ಫೆ-20: ಚೀನಾದ ಮಹತ್ವಾಕಾಂಕ್ಷಿ ಯೋಜನೆ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಸೆಡ್ಡು ಹೊಡೆಯುವ ಕುರಿತು ಮುನ್ಸೂಚನೆ ನೀಡಿದ್ದ ಭಾರತ, ಇದೀಗ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದು, ಆಸ್ಚ್ರೇಲಿಯಾ, ಅಮೆರಿಕ, ಜಪಾನ್ ಸಹಭಾಗಿತ್ವದಲ್ಲಿ ಹೊಸ ಪ್ರಾದೇಶಿಕ ಮೂಲಸೌಕರ್ಯ ಯೋಜನೆಗೆ ಕೈ ಹಾಕಿದೆ.

ಈ ಬಗ್ಗೆ ಸ್ವತಃ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದು, ದಕ್ಷಿಣ ಏಷ್ಯಾದಲ್ಲಿ ಒನ್ ಬೆಲ್ಟ್ ಮತ್ತು ಒನ್ ರೋಡ್ ಯೋಜನೆ ಮೂಲಕ ಚೀನಾ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿದೆ. ಇದಕ್ಕೆ ಪ್ರತಿಯಾಗಿ ಭಾರತ, ಅಮೆರಿಕ, ಜಪಾನ್, ಆಸ್ಚ್ರೇಲಿಯಾ ಸಹಭಾಗಿತ್ವದಲ್ಲಿ ಪರ್ಯಾಯವಾಗಿ ಹೊಸ ಯೋಜನೆ ಆರಂಭಿಸುವ ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ.

ಈ ನಾಲ್ಕು ರಾಷ್ಟ್ರಗಳು ಒಗ್ಗೂಡಿ ಹೊಸ ಪ್ರಾದೇಶಿಕ ಮೂಲಸೌಕರ್ಯ ಯೋಜನೆಗೆ ಮುಂದಾಗಿದ್ದು, ಈ ಹೊಸ ಯೋಜನೆ ಇನ್ನೂ ಪ್ರಾರಂಭಿಕ ಹಂತದಲ್ಲಿದೆ. ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಂ ಟರ್ನ್‌ಬುಲ್ ಅವರು ಈ ವಾರದ ಕೊನೆಯಲ್ಲಿ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಈ ಹಿಂದೆ ಆಸಿಸ್ ಪ್ರಧಾನಿಗಳ ಪ್ರವಾಸದ ವೇಳೆ ಯೋಜನೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ನೂತನ ಯೋಜನೆಯಲ್ಲಿ ಬಂದರುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ರೈಲು ಸೌಕರ್ಯ ಕಲ್ಪಿಸಲಾಗುತ್ತದೆ. ಈ ಯೋಜನೆಯನ್ನು ಚೀನಾದ ಯೋಜನೆಯ ಪ್ರತಿಸ್ಪರ್ಧಿ ಎನ್ನುವುದಕ್ಕಿಂತ ಪರ್ಯಾಯ ಎಂದರೆ ಸೂಕ್ತ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಜಪಾನ್‌ ನ ಸಂಪುಟ ಕಾರ್ಯದರ್ಶಿ ಯೊಶಿಹಿದೆ ಸುಗಾ ಅವರು, ಜಪಾನ್, ಅಮೆರಿಕ, ಆಸ್ಟ್ರೇಲಿಯಾ, ಭಾರತವು ತಮ್ಮ ಸಮಾನ ಹಿತಾಸಕ್ತಿಯ ಕುರಿತು ಪರಸ್ಪರರ ಅಭಿಪ್ರಾಯಗಳನ್ನು ನಿರಂತರವಾಗಿ ಹಂಚಿಕೊಳ್ಳುತ್ತಲೇ ಬಂದಿವೆ ಎಂದಿದ್ದಾರೆ.

ಒಟ್ಟಾರೆಯಾಗಿ ವಿಶ್ವದ ವಿವಿಧ ರಾಷ್ಟ್ರಗಳ ಜತೆ ವ್ಯಾಪಾರ ಮತ್ತು ಸಾರಿಗೆ ಸಂಬಂಧ ವೃದ್ಧಿಸುವ ನಿಟ್ಟಿನಲ್ಲಿ ಚೀನಾ ಮಾಡಿದ್ದ ರಸ್ತೆ ಯೋಜನೆಗೆ ನಾಲ್ಕು ರಾಷ್ಟ್ರಗಳು ಪರ್ಯಾಯ ಯೋಜನೆ ಜಾರಿಗೆ ತರಲು ಮುಂದಾಗಿರುವುದು ಮಹತ್ವದ್ದಾಗಿದೆ.

India, US, Japan, Australia consider ‘alternative’ to China’s ‘One Belt One Road Initiative

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ