ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸ್ ಠಾಣೆಯಿಂದ ಹೊರಗೆಳೆದು ಹೊಡೆದು ಸಾಯಿಸಿದ ಜನರು

ಇಟಾನಗರ:ಫೆ-20: ಉದ್ರಿಕ್ತರ ಗುಂಪು ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸ್ ಠಾಣೆಯಿಂದ ಹೊರಗೆಳೆದು ಮಾರಣಾಂತಿಕ ಹಲ್ಲೆ ನಡೆಸಿ ಸಾಯಿಸಿದ ಘಟನೆ ಅರುಣಾಚಲ ಪ್ರದೇಶದ ಲೋಹಿತ್‌ ಜಿಲ್ಲೆಯಲ್ಲಿ ನಡೆದಿದೆ.

ಅಸ್ಸಾಮಿನ ಟೀ ಪ್ಲಾಂಟೇಶನ್‌ ಕಾರ್ಮಿಕರಾದ 32 ವರ್ಷದ ಸಂಜಯ್‌ ಸೋಬೋರ್‌ ಮತ್ತು 25 ವರ್ಷದ ಜಗದೀಶ್‌ ಲೋಹಾರ್‌ ಎಂಬವರನ್ನು ಉದ್ರಿಕ್ತ ಸಮೂಹ ಪೊಲೀಸ್‌ ಠಾಣೆಯಿಂದ ಹೊರಗೆಳೆದು ಮಾರ್ಕೇಟ್‌ ಚೌಕಕ್ಕೆ ಒಯ್ದು ಅಲ್ಲಿ ಪೊಲೀಸರ ಎದುರೇ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಚಚ್ಚಿ ಸಾಯಿಸಿದ್ದಾರೆ. ಕೊಲೆ ಮತ್ತು ಅತ್ಯಾಚಾರದ ಆರೋಪಿಗಳಾಗಿರುವ ಈ ಇಬ್ಬರ ಶವಗಳನ್ನು ಉದ್ರಿಕ್ತ ಜನರು ಅನಂತರ ಮಾರ್ಕೆಟ್‌ ಪ್ರದೇಶದಲ್ಲಿ ಒಂದೆಡೆ ಬಿಸಾಕಿದ್ದಾರೆ.

ಅಲ್ಲದೇ ಆರೋಪಿಗಳಿಬ್ಬರ ಶವಗಳನ್ನು ಅನಂತರ ಉದ್ರಿಕ್ತ ಸಮೂಹ ಬೆಂಕಿ ಹಚ್ಚಿ ಸುಡಲು ಯತ್ನಿಸಿದೆ. ಆದರೆ ಪೊಲೀಸರು ಧಾವಿಸಿ ಅವರನ್ನು ತಡೆದಿದ್ದಾರೆ.

ಘಟನೆಯ ಹಿನ್ನೆಲೆಯಾಗಿ ಐದೂವರೆ ವರ್ಷದ ಬಾಲಕಿಯು ವಾಕ್ರೋ ಪೊಲೀಸ್‌ ಠಾಣೆ ವ್ಯಾಪ್ತಿಯ ಗ್ರಾಮದಿಂದ ಕಳೆದ ಫೆ.12ರಂದು ನಾಪತ್ತೆಯಾಗಿದ್ದಳು. ಅದಾಗಿ ಕೆಲದಿನಗಳಲ್ಲಿ ಬಾಲಕಿಯ ಸಂಬಂಧಿಕ ಬಾಲಕಿಯ ಶಿರಚ್ಛೇದಿತ, ವಿರೂಪಗೊಳಿಸಲಾದ ಶವವನ್ನು ಸಮೀಪ ನಾಮ್‌ಗೊ ಗ್ರಾಮದ ಅರಣ್ಯದಲ್ಲಿ, ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಪತ್ತೆ ಹಚ್ಚಿದರು.

ಇದನ್ನು ಅನುಸರಿಸಿ ಪೊಲೀಸರು ಕೊಲೆ, ಅತ್ಯಾಚಾರ ಆರೋಪಿಗಳಾಗಿರುವ ಸೋಬಾರ್‌ ಮತ್ತು ಲೋಹಾರ್‌ ನನ್ನು ಬಂಧಿಸಿದರು. ತಾವು ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಎಸಗಿದ್ದು ಹೌದೆಂಬುದನ್ನು ಇವರು ಒಪ್ಪಿಕೊಂಡಿದ್ದರು. ಕಳೆದ ಭಾನುವಾರ ಈ ಇಬ್ಬರೂ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ ಅವರನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿತ್ತು. ಬಳಿಕ ಉದ್ರಿಕ್ತರ ಗುಂಪು ಈ ಕೃತ್ಯ ನಡೆಸಿದೆ.

ಇನ್ನು ಈ ಇಬ್ಬರು ಅತ್ಯಾಚಾರ – ಕೊಲೆ ಆರೋಪಿಗಳನ್ನು ಚಚ್ಚಿ ಸಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈಗ ಅಪರಿಚಿತ ವ್ಯಕ್ತಿಗಳ ವಿರುದ್ಧ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ನಡುವೆ ಉದ್ರಿಕ್ತ ಸಮೂಹವನ್ನು ತಡೆಯುವಲ್ಲಿ ವಿಫ‌ಲರಾದ ಕಾರಣಕ್ಕೆ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ; ಜಿಲ್ಲಾ ಪೊಲೀಸ್‌ ಸುಪರಿಂಟೆಂಡೆಂಟರನ್ನು ವರ್ಗಾಯಿಸಲಾಗಿದೆ ಎಂದು ತಿಳಿದು ಬಂದಿದೆ.

Arunachal pradesh,mob drags, 2-rape-murder accused,out of police station,beats them to death

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ