ಮಂಡ್ಯ:ಏ.16: ಮಂಡ್ಯದಿಂದ ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದ್ದು, ಯುವ ಮುಖಂಡ ಪಿ ರವಿಕುಮಾರ್ ಗೌಡ ಗಣಿಗ ಅವರಿಗೆ ಟಿಕೆಟ್ ಕೈತಪ್ಪಿದ ಹಿನ್ನಲೆಯಲ್ಲಿ ಕಾಂಗ್ರೆಸ್ ನಲ್ಲಿ ಭಿನ್ನಮತ ಭುಗಿಲೆದ್ದಿದೆ.
ಈ ಹಿನ್ನಲೆಯಲ್ಲಿ ಆಕ್ರೋಶಗೊಂಡಿರುವ ರವಿಕುಮಾರ್ ಬೆಂಬಲಿಗರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಕಚೇರಿಯಲ್ಲಿ ನ ಕುರ್ಚಿಗಳನ್ನು ಒಡೆದು ಹಾಕಿ, ಕರಪತ್ರಗಳು ಹಾಗೂ ಬ್ಯಾನರ್ಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಟಿಕೆಟ್ಗಾಗಿ ಅರ್ಜಿಯನ್ನೂ ಸಲ್ಲಿಸದ ಅಂಬರೀಷ್ ಅವರಿಗೆ ಪಕ್ಷ ಟಿಕೆಟ್ ಘೋಷಣೆ ಮಾಡಿದೆ. ಟಿಕೆಟ್ಗೆ ಪ್ರಬಲ ಆಕಾಂಕ್ಷಿಯಾಗಿದ್ದ ರವಿಕುಮಾರ್ಗೌಡ ಅವರಿಗೆ ಟಿಕೆಟ್ ಕೈತಪ್ಪಿದೆ ಎಂದು ಬೆಂಬಲಿಗರು ದೂರಿದ್ದಾರೆ. ಅಲ್ಲದೇಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರವಿಕುಮಾರ್ ಬೆಂಬಲಿಗರು ಅರೆಬೆತ್ತಲೆ ಮೆರವಣಿಗೆ ನಡೆಸಿದರು.
ಮೆರವಣಿಗೆಯಲ್ಲೇ ನಗರದ ಬಂದೀಗೌಡ ಬಡಾವಣೆಯಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ತೆರಳಿದರು. ಅಲ್ಲಿಗೆ ಹೋಗುತ್ತಿದ್ದಂತೆ ಉದ್ರಿಕ್ತಗೊಂಡ ಗುಂಪು ಕಚೇರಿಯಲ್ಲಿ ಕುರ್ಚಿಗಳನ್ನು ಒಡೆದುಹಾಕಿ ದಾಂಧಲೆ ನಡೆಸಿದೆ.
ಈ ನಡುವೆ ಬೆಂಬಲಿಗರ ಆಕ್ರೋಶ ಕಟ್ಟೆಯೊಡೆಯುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ರವಿಕುಮಾರ್ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಟಿಕೆಟ್ ಕೇಳುವುದು ನಮ್ಮ ಹಕ್ಕು. ಈ ಹಕ್ಕು ಪ್ರತಿಪಾದನೆ ಮಾರ್ಗವು ಪ್ರತಿಭಟನೆಯ ಸ್ವರೂಪ ಪಡೆಯುವುದು ಸಹಜ. ಆದರೆ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು. ಉದ್ವೇಗಕ್ಕೆ ಒಳಗಾಗಬೇಡಿ ಎಂದು ಮನವಿ ಮಾಡಿದ್ದಾರೆ.
Assembly election, Mandya,Ravikumar gouda Ticket miss,Congress workers,protest