ಕಾಂಗ್ರೆಸ್ ಜನಾಶಿರ್ವಾದ ಯಾತ್ರೆ ಸಮಾರೋಪಸಮಾರಂಭ: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಬೆಂಗಳೂರು: ಏ.8- ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಗಣನೀಯವಾಗಿದ್ದರು, ಪೆಟ್ರೋಲ್, ಡಿಸೇಲ್ ಬೆಲೆ ನಿರಂತರವಾಗಿ ಹೆಚ್ಚತ್ತಲೆ ಇದೆ. ಆ ಹಣವೇಲ್ಲಾ ಯಾರ ಜೇಬಿಗೆ ಹೋಗುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜನಾರ್ಶಿವಾದ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಅವರು, ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಕಚ್ಚಾ ತೈಲದ ಬೆಲೆ ಬ್ಯಾರೆಲ್ ಗೆ 150 ಡಾಲರ್ ಇತ್ತು. ಈಗ 60 ಡಾಲರ್ ಆಗಿದೆ. ಇಷ್ಟು ದರ ಇಳಿದರು ಇಂಧನದ ಬೆಲೆ ಮಾತ್ರ ಕಡಿಮೆಯಾಗಿಲ್ಲ. ವಿಶ್ವ ಎಲ್ಲ ದೇಶಗಳಲ್ಲೂ ಇಂಧನದ ಬೆಲೆ ಇಳಿಯತ್ತಿದೆ. ಭಾರತದಲ್ಲಿ ಬೆಲೆ ಇಳಿಕೆ ಬದಲಾಗಿ ಏರಿಕೆಯಾಗುತ್ತಿದೆ. ನಾಲ್ಕು ವರ್ಷದಲ್ಲಿ ಪೆಟ್ರೋಲ್ ಬೆಲೆ ಶೇ. 210ರಷ್ಟು, ಡಿಸೇಲ್ ಬೆಲೆ ಶೇ.430 ಏರಿಕೆಯಾಗಿದೆ. ಅಂತರಾಷ್ಟ್ರೀಯ ಮಟ್ಟದ ಕಚ್ಚಾತೈಲದ ಬೆಲೆ ಇಳಿಕೆಯಿಂದ ಬರುತ್ತಿರುವ ಲಾಭದ ಹಣ ಯಾರ ಜೇಬಿಗೆ ಹೋಗುತ್ತಿದೆ ಎಂದು ರಾಹುಲ್ ಪ್ರಶ್ನಿಸಿದರು.

ಕರ್ನಾಟಕದ ವಿಧಾನಸಭೆ ಚುನಾವಣೆ ಎರಡು ವಿಚಾರಗಳ‌ ಸಂಘರ್ಷವಾಗಿದೆ. ಒಂದು ವಿಚಾರಧಾರೆ ಸೌಹಾರ್ದತೆಗೆ ಹೆಸರಾದ ಬೆಂಗಳೂರು ಬ್ರಾಂಡ್, ಇನ್ನೊಂದು ವಿಚಾರಧಾರೆ ಎಂದರೆ ಆರ್ ಎಸ್ ಎಸ್ ನ ದ್ವೇಷಿಯ ಮತ್ತು ವಿಭಜನೆ ವಿಚಾರದ ಸಂಘರ್ಷವಾಗಿದೆ ಎಂದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತಾ ಶಾ ವಿರೋಧ ಪಕ್ಷದವರನ್ನು ಪ್ರಾಣಿಗೆ ಹೋಲಿಸುತ್ತಾರೆ. ಬೇಕು, ನಾಯಿ ಎಂದೆಲ್ಲಾ ಕೀಳಾಗಿ ಮಾತನಾಡುತ್ತಾರೆ. ಕಾಂಗ್ರೆಸ್ ನಾಯಕರು ವಿಪಕ್ಷದವರನ್ನು ಇಷ್ಟು ಕೀಳಾಗಿ ಚಿತ್ರಿಸಿ ಯಾವತ್ತು ಮಾತನಾಡಿಲ್ಲ. ಇದು ಕಾಂಗ್ರೆಸ್ ಗೂ ಬಿಜೆಪಿಗೂ ಇರುವ ವ್ಯತ್ಯಾಸ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆ ವೇಳೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪಕ್ಕದಲ್ಲೆ ಇರುತ್ತಾರೆ ಎಂದು ಲೇವಡಿ ಮಾಡಿದರು‌.
ಮೋದಿ ಅವರು ಕರ್ನಾಟಕದ ಭ್ರಷ್ಟಚಾರದ ಬಗ್ಗೆ ಮಾತನಾಡುವ ಮೊದಲು ಗುಜರಾತ್ ನ ಪೆಟ್ರೋಲಿಯಂ ಹಗರಣ ಬಗ್ಗೆ, ಅಮಿತ್ ಶಾ ಅವರ ಪುತ್ರ ಮೂರೆ ತಿಂಗಳಲ್ಲಿ 50 ಸಾವಿರವನ್ನು 80 ಕೋಟಿಯಾಗಿ ಪರಿವರ್ತಿಸಿದ ಬಗ್ಗೆ, ಕರ್ನಾಟಕದಲ್ಲಿ ಯಡಿಯೂರಪ್ಪ ಸರ್ಕಾರದ ಭ್ರಷ್ಟಚಾರದ ಬಗ್ಗೆ, ರಫಾಯಲ್ ಯುದ್ಧ ವಿಮಾನ ಖರೀದಿ ಹಗರಣದ ಬಗ್ಗೆಯೂ ಮಾತನಾಡಲಿ. ಮೋದಿ ಮುಂದೆ ಬೆಂಗಳೂರಿಗೆ ಬಂದಾಗ ಈ ಎಲ್ಲಾ ವಿಷಯಗಳ ಬಗ್ಗೆ ಮಾತನಾಡಲಿ ಎಂದು ರಾಹುಲ್ ಒತ್ತಾಯಿಸಿದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 750 ಕೋಟಿ ರೂ.ಗೆ ಒಂದು ರಫಾಯಲ್ ಯುದ್ಧ ವಿಮಾನ ಖರೀದಿಗೆ ಮಾತುಕತೆ ನಡೆಸಿತ್ತು. ಬೆಂಗಳೂರಿನ ಎಚ್‌ಎ‌ಎಲ್‌ ಮೂಲಕ ಖರೀದಿಸುವ ನಿರ್ಣಯವಾಗಿತ್ತು. ಮೊದಲಿನ ಒಪ್ಪಂದಂತೆ ರಫಾಯಲ್ ಖರೀದಿಯಾಗಿದ್ದರೆ ಲಕ್ಷಾಂತರ ಮಂದಿಗೆ ಉದ್ಯೋಗ ಸಿಗುತ್ತಿತ್ತು. ಅದರೆ ಮೋದಿ ಪ್ರಾನ್ಸ್ ಗೆ ಹೋಗಿ ಒಪ್ಪಂದವನ್ನು ಬದಲಾಯಿಸಿದರು. ವಿಮಾನ ತಯಾರಿಕೆಯಲ್ಲಿ ಅನುಭವ ಇರುವ ಎಚ್ ಎ ಎಲ್ ಬದಲು ಮೋದಿ ಅವರು ರಫಾಯಲ್ ಖರೀದಿ ಗುತ್ತಿಗೆಯನ್ನು ತಮ್ಮ ಮಿತ್ರ ಉದ್ಯಮಿಗೆ ಕೊಡಿಸಿದ್ದಾರೆ. ಇದರಿಂದ ಮೋದಿ ಅವರ ಉದ್ಯಮಿ ಮಿತ್ರನಿಗೆ ಸಾವಿರಾರು ಕೋಟಿ ರೂ.ಗಳ ಲಾಭವಾಗಿದೆ. ಆ ಮಿತ್ರನ ಸಂಸ್ಥೆ ನಲ್ವತ್ತು ಲಕ್ಷ ಕೋಟಿ ರೂ. ಸಾಲ ಹೊಂದಿದ್ದಾರೆ ಎಂಬುದು ಅತಂಕದ ವಿಚಾರ. ಈ ಒಪ್ಪಂದದಿಂದ ದೇಶದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ. ನಷ್ಟವಾಗಿದೆ ಎಂದು ಹೇಳಿದರು.

ಮೋದಿ ಅವರು ರೈತರ ಒಂದು ರೂಪಾಯಿ ಸಾಲವನ್ನು ಮನ್ನಾ ಮಾಡಿಲ್ಲ. ಆದರೆ ಉದ್ಯಮಿಗಳ 2 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ನಮ್ಮ ಸಿಎಂ ರೈತರ 8500 ಕೋಟಿ ರೂ‌. ರೈತರ ಸಾಲ ಮನ್ನಾ ಮಾಡಿದ್ದಾರೆ.‌

ರಾಜ್ಯ ಬರಗಾಲದಿಂದ ತತ್ತರಿಸುತ್ತಿದ್ದರೆ ಕೇಂದ್ರ ಸರ್ಕಾರ ಕಡಿಮೆ ಹಣ ನೀಡಿದೆ. ಮಹಾರಾಷ್ಟ್ರಕ್ಕೆ 8 ಸಾವಿರ ಕೋಟಿಯನ್ನಾ, ಗುಜರಾತ್ ಗೆ 3 ಸಾವಿರ ಕೋಟಿ ಕೊಟ್ಟರೆ, ಕರ್ನಾಟಕಕ್ಕೆ 1600 ಕೋಟಿ ರೂ.ಮಾತ್ರ ಕೋಟ್ಟಿದ್ದಾರೆ. ಕಡಿಮೆ ಅನುದಾನ ಪಡೆಯಲು ನಾಡಿನ ಜನತೆ ಏನು ತಪ್ಪು ಮಾಡಿದ್ದಾರೆ ಎಂದು ರಾಹುಲ್ ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರ ಸರ್ಕಾರ ಹಸಿವು ಮುಕ್ತ ರಾಜ್ಯಕ್ಕಾಗಿ ಅನ್ನ ಭಾಗ್ಯ ಯೋಜನೆ ಜಾರಿ ಗೊಳಿಸಿ, ಇಂದಿರಾ ಕ್ಯಾಂಟಿನ್ ಆರಂಭಿಸಿದೆ ಎಂದರು.

ಮೋದಿ ದಲಿತರ ಅಭಿವೃದ್ದಿ ಬಗ್ಗೆ ಮಾತನಾಡುತ್ತಾರೆ. ಆದರೆ ರೋಹಿತ್ ವೇಮುಲ ಅತ್ಮಹತ್ಯೆಯಾದಾಗ, ಉತ್ತರ ಪ್ರದೇಶದಲ್ಲಿ ದಲಿತರ ಹತ್ಯೆಯಾದಾಗ ಮೋದಿ ಒಂದು‌ ಮಾತನ್ನು ಆಡಲಿಲ್ಲ.
ಕೆಂದ್ರ ಸರ್ಕಾರ ದೇಶಾದ್ಯಂತ ದಲಿತರ ಅಭಿವೃದ್ದಿಗೆ ಮೀಸಲಿಟ್ಟ ಹಣದಲ್ಲಿ ಅರ್ಧದಷ್ಟನ್ನು ಕರ್ನಾಟಕ ಸರ್ಕಾರವೊಂದೆ ತನ್ನ ನಾಡಿನ ದಲಿತರಿಗೆ ಖರ್ಚು ಮಾಡಿದೆ ಎಂದು ಹೇಳಿದರು.

ರಾಜ್ಯದಲ್ಲಿ ಮೂರು ತಿಂಗಳಿಂದ ಪ್ರವಾಸ ಮಾಡಿದ್ದೇನೆ. ರೈತರು, ವಿದ್ಯಾರ್ಥಿಗಳು, ಮಹಿಳೆಯರು, ಉದ್ಯಮಿಗಳ ಜೊತೆ ಸಂವಾದ ನಡೆಸಿದ್ದೇನೆ. ನನ್ನ ಸಂವಾದದಲ್ಲಿ ಹಲವಾರು ವಿಷಯಗಳು ಕೇಳಿಬಂದಿವೆ. ಅವಗಳನ್ನು ಮುಂದಿನ ವಿಧಾನ ಸಭೆಯ ಚುನಾವಣಾ ಪ್ರನಾಳಿಕೆಯಲ್ಲಿ ಅಳವಡಿಸಲಾಗುವುದು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ನೇತೃತ್ವದ ಸಮಿತಿ ಪ್ರನಾಳಿಕೆ ತಯಾರಿಸುತ್ತಿದೆ, ಅದರಲ್ಲಿ ನಾನು ಸಂವಾದದಲ್ಲಿ ತಿಳಿದುಕೊಂಡ ವಿಷಯಗಳನ್ನು ಪ್ರಾನಾಳಿಕೆಯಲ್ಲಿ ಇರುವಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಮೋದಿ ಹೊದಕಡೆಯಲ್ಲೆಲ್ಲಾ ತಮ್ಮ ಮನದ ಮಾತುಗಳನ್ನು ಹೇಳುತ್ತಾರೆ, ನಾವು ನಿಮ್ಮ ಮನದ ಮಾತನ್ನು ಕೇಳುತ್ತೇವೆ. ಎಲ್ಲರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದು ಕಾಂಗ್ರೆಸ್ ಶ್ರಮಿಸುತ್ತದೆ ಎಂದು ಹೇಳಿದರು.

ಬೆಂಗಳೂರು ವಿಶ್ವಪ್ರಸಿದ್ಧಿ‌ಆಗಲು ಜನರ ಯೋಚನೆ ಮತ್ತು ಕಾಂಗ್ರೆಸ್ ಸರ್ಕಾರಗಳ ಕೊಡುಗೆಗಳು ಕಾರಣ. ಜಗಜ್ಯೋತಿ ಬಸವಣ್ಣ ಅವರು ತಮ್ಮ ವಿಚಾರಗಳಿಂದ ನಾಡಿನ ಮನೆ ಮನೆಗಳಲ್ಲಿ ನೆಲೆಸಿದ್ದಾರೆ. ನುಡಿದಂತೆ ನಡೆಯುವುದು ಇಲ್ಲಿನ ಪ್ರತಿಯೊಬ್ಬರ ಡಿಎನ್‌ಎನಲ್ಲಿದೆ, ಮನಸ್ಸಿನಲ್ಲಿದೆ‌. ನಮ್ಮ ಸರ್ಕಾರ ಬಸವಣ್ಣ ಅವರ ವಿಚಾರದಂತೆ ನಡೆದಿದೆ. ಬೆಂಗಳೂರು ಬಸವಣ್ಣ ಹಾಗೂ ಕೇಂಪೆಗೌಡರ ಆಶಯದಂತೆ ನಿರ್ಮಾಣಗೊಂಡಿದೆ.

ಬೆಂಗಳೂರಿನಲ್ಲಿ ಪ್ರತಿಷ್ಠಿತ ಸಂಸ್ಥೆಗಳನ್ನು ಕಾಂಗ್ರೆಸ್ ಸರ್ಕಾರ ಸ್ಥಾಪನೆ ಮಾಡಿದೆ. ಅದಕ್ಕಾಗಿ ಬಹಳಷ್ಟು ಜನ ಬೇವರು ಹರಿಸಿದ್ದಾರೆ. ದಶಕಗಳ ಶ್ರಮ ಫಲವಾಗಿ ಬೆಂಗಳೂರಿಗೆ ವಿಶ್ವಮಾನ್ಯತೆ ಸಿಕ್ಕಿದೆ.
ಇಲ್ಲಿ ಎಲ್ಲಾ ಭಾಷೆ, ಧರ್ಮಕ್ಕೂ ಸಮಾನ ಅವಕಾಶ ಸಿಕ್ಕಿದೆ.‌ ದೇಶದ ಎಲ್ಲೆಡೆಯಿಂದ ಜನ ಇಲ್ಲಿಗೆ ಬರುತ್ತಾರೆ, ಬಂದವರನ್ನು ಬೆಂಗಳೂರಿಗರು ಸ್ವಾಗತಿಸಿ, ಅಭಿವೃದ್ದಿಯಾಗಲು ಸಹಕರಿಸುತ್ತಾರೆ.
ಅಮೇರಿಕಕ್ಕೆ ಭಾರತ ಮತ್ತು ಚೀನಾ ಪೈಪೋಟಿ ನೀಡಲು ಸಾಧ್ಯ ಎಂದು ಅಮೇರಿಕಾದ ಅಧ್ಯಕ್ಷರು ಹೇಳುತ್ತಾರೆ. ಭಾರತ ಈ ಮಟ್ಟಿಗೆ ಗುರುತಿಸಿಕೊಳ್ಳಲು ಬೆಂಗಳೂರು ಕಾರಣ. ಇಲ್ಲಿ ಬಂಡವಾಳ ಹೂಡಿಕೆಗೆ ಉತ್ತಮ ವಾತವರಣವಿದೆ. ಐದು ವರ್ಷದಲ್ಲಿ ಮೂರಯವರೆ ಲಕ್ಷ ಕೋಟಿ ಬಂಡವಾಳ ಹರಿದು ಬಂದಿದೆ. ಸಿಲಿಕಾನ್ ವ್ಯಾಲಿ ನಂತರ ಬೆಂಗಳೂರಿಗೆ ವಿಶ್ವಮಾನ್ಯತೆ ಸಿಕ್ಕಿದೆ‌ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಸರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಚಿವರಾದ ಡಿ.ಕೆ‌.ಶಿವಕುಮಾರ್, ಕೆ.ಜೆ.ಜಾರ್ಜ್, ರಾಮಲಿಂಗಾ ರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್, ಎಸ್.ಆರ್.ಪಾಟೀಲ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Assembly election,rahul gandhi,janashirvada yatre

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ