ನನಗೆ ಬೆಂಬಲ ನೀಡಿದವರಿಗೆ ಅಧಿಕಾರದಲ್ಲಿರುವವರು ತೊಂದರೆ ಕೊಡುತ್ತಿದ್ದಾರೆ: ಸುಮಲತಾ ಆರೋಪ

ಮಂಡ್ಯ: ನನಗೆ ಬೆಂಬಲ ನೀಡಿದವರನ್ನು ಅಧಿಕಾರದಲ್ಲಿರುವವರು ಈಗ ಟಾರ್ಗೆಟ್ ಮಾಡುತ್ತಿದ್ದಾರೆ. ಅವರಿಗೆ ತೊಂದರೆ ಕೊಡುತ್ತಿದ್ದಾರೆ. ದಯವಿಟ್ಟು ಯಾರಿಗೂ ತೊಂದರೆ ಕೊಡಬೇಡಿ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದ್ದಾರೆ.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಮಲತಾ, ಚುನಾವಣೆ ಮುಕ್ತಾಯವಾಗಿದೆ ಆದರೆ ಈಗ ನಮ್ಮ ಬೆಂಬಲಿಗರಿಗೆ ಕಿರುಕುಳ ನೀಡುತ್ತಿದ್ದಾರೆ. ನನ್ನ ಪರವಾಗಿ ನಿಂತ ಚಿತ್ರನಟರು ಪ್ರಾಯಶ್ಚಿತ್ತ ಪಡಬೇಕಾಗುತ್ತದೆ ಎಂದು ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇದರ ಅರ್ಥ ಏನು ಅಂತ ಗೊತ್ತಾಗಬೇಕು. ಯಾರಿಗೆ ಬೆದರಿಕೆ ಹಾಕುತ್ತಿದ್ದಾರೆ ಗೊತ್ತಾಗಬೇಕು. ಈಗಾಗಲೇ ಈ ಸಂಬಂಧ ನಾನು ಎಸ್‍ಪಿ ಗಮನಕ್ಕೂ ತಂದಿದ್ದೇನೆ ಎಂದರು.

ನಾನು ಅಂಬರೀಶ್ ಗಾಗಿ ಏನೂ ಮಾಡಿಲ್ಲ. ಆದರೆ ಜನರೇ ಎಲ್ಲವನ್ನೂ ಮಾಡುತ್ತಿದ್ದಾರೆ. ರಾಜಕೀಯಕ್ಕಾಗಿ ನಾನು ಚುನಾವಣೆಗೆ ಬಂದಿಲ್ಲ. ಮಂಡ್ಯ ಜಿಲ್ಲೆಯ ಜನರ ಜೊತೆ ಇರುವ ಸಲುವಾಗಿಯೇ ಚುನಾವಣೆಗೆ ಬಂದಿದ್ದೇನೆ. ಚುನಾವಣೆ ಬರುತ್ತದೆ ಹೋಗುತ್ತದೆ. ಅಂಬರೀಶ್ ಅವರ ಹೆಸರು ಬರೀ ಚುನಾವಣೆಗೆ ಸಂಬಂಧಿಸಿದ್ದಲ್ಲ. ನಾನು ಮಂಡ್ಯ ಜನರ ಜೊತೆ ಇರುತ್ತೇನೆ. ಮಂಡ್ಯವೇ ನನಗೆ ಸಿಂಗಾಪುರ್. ಇಲ್ಲಿನ ಜನರೇ ನನಗೆ ಎಲ್ಲವೂ ಆಗಿದ್ದಾರೆ ಎಂದು ಹೇಳಿದರು.

ನಾನು 15 ವರ್ಷದವಳಿದ್ದಾಗ ಸಿನಿಮಾಗೆ ಬಂದೆ. ಕುಟುಂಬದ ಜವಾಬ್ದಾರಿ ಇತ್ತು. ನಂತರ ಪತ್ನಿಯಾಗಿ, ತಾಯಿಯಾಗಿ ಜವಾಬ್ದಾರಿ ನಿಭಾಯಿಸಿದೆ. ತಾಯಿಗಿಂತ ದೊಡ್ಡ ಜವಾಬ್ದಾರಿ ಯಾವುದೂ ಇಲ್ಲ. ಅವರು ಮತ್ತು ಮಗನನ್ನು ನೋಡಿಕೊಳ್ಳಬೇಕಿತ್ತು. ಯಾವಾಗ ಅಂಬರೀಷ್ ಇಲ್ಲ ಎಂದು ಮಂಡ್ಯ ಜನರು ಬಂದರೋ ಆಗ ಇಲ್ಲಿಗೆ ಬರಬೇಕಾಯಿತು ಎಂದು ತಿಳಿಸಿದರು.

ಈ ಬಾರಿ ನಾನು ಗೆಲ್ಲುವ ವಿಶ್ವಾಸವಿದೆ, ಇದಕ್ಕೆ ಕಾರಣ ಮಹಿಳೆಯರು, ಅವ್ರು ನನ್ನ ನೋವಿಗೆ ಸ್ಪಂದಿಸಿದ್ದಾರೆ ಅನ್ನೋ ಭರವಸೆ ಇದೆ. ಇನ್ನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ನನಗೆ ಕ್ಷೇತ್ರದಾದ್ಯಂತ ಉತ್ತಮ ಜನ ಬೆಂಬಲ ಸಿಕ್ಕಿತು. ನಾನು ಹಾಕಿದ ಪ್ರತಿ ಹೆಜ್ಜೆಗೆ ಕಾಂಗ್ರೆಸ್ ಕಾರ್ಯಕರ್ತರು ಕಾರಣಕರ್ತರಾಗಿದ್ದಾರೆ. ಹಾಗೆಯೇ ಬಹಿರಂಗ ಬೆಂಬಲ ನೀಡಿದ ಬಿಜೆಪಿ, ರೈತಸಂಘಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಮಂಡ್ಯ ಜಿಲ್ಲೆಯವರಲ್ಲದೆ,ಬೇರೆ ಜಿಲ್ಲೆಯಿಂದ ಬಂದು ಹಲವರು ಬಂದು ನನ್ನನು‌ ಬೆಂಬಲಿಸಿದ್ದಾರೆ ಅದು ಕೂಡ ಅವೀಸ್ಮರಣೀಯ ಕ್ಷಣ. ಮೊದಲ ದಿನದಿಂದ ಕೊನೆಯ ದಿನದವರೆಗೂ ಜನ್ರ ಪ್ರತಿಕ್ರಿಯೆ ಹಾಗೇ ಇದ್ದಿದ್ದು ಖುಷಿ ಕೊಟ್ಟಿದೆ. ರಾಜಕೀಯವಾಗಿ ನಾನು ಯಾವುದೇ ಪ್ಲಾನ್ ಮಾಡಿಲ್ಲ ನಾನು ಜಿಲ್ಲೆಯ ಅಭಿವೃದ್ದಿ ಪರವಾಗಿ ಕೆಲಸ‌ ಮಾಡ್ತಿನಿ. ಮುಂದಿನ ಅಭಿಪ್ರಾಯವನ್ನು ಮತ್ತೆ ಜನರ ಬಳಿ ತೀರ್ಮಾನ ಮಾಡಿಕೊಳ್ಳುತ್ತೇನೆ.ಜನ ಏನ್ ಹೇಳುತ್ತಾರೋ ಹಾಗೇ ಕೇಳುತ್ತೀನಿ ಎಂದರು.

ನಾನು ಜಾತೀರಣ ಮಾಡಿಲ್ಲ,ನಾನು ಅದನ್ನ ಮಾಡೋದು ಇಲ್ಲ,ಜನನು ಈ ಬಾರಿ ಅದನ್ನು ಒಪ್ಪಿಕೊಂಡಿಲ್ಲ. ಇನ್ನು ನಾನು ಕನಕನಮರಡಿ ದುರಂತ ಹಾಗು ಹುತಾತ್ಮ ಗುರು ಯೋಧ ಕುಟುಂಬಕ್ಕೆ ಸಹಾಯ ಮಾಡಿದ್ದೆ. ಆದ್ರೆ ನಾನೆಂದೂ ಇದನ್ನು ಪ್ರಚಾರದಲ್ಲಿ ಹೇಳಿಕೊಂಡಿಲ್ಲ ಎಂದರು.

Sumalata ambareesh,mandya,press meet,slams cm H D kumaraswamy

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ