ಅರಸೀಕೆರೆ, ಆ.10- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನಡೆ ಸಾರ್ವಜನಿಕ ಜೀವನದಲ್ಲಿ ಆದರ್ಶ ಆಗಿದೆ ಇದಕ್ಕೆ ರಾಜಕೀಯ ಬಣ್ಣ ಕಟ್ಟುವುದು ಸರಿಯಲ್ಲ ಎಂದು ಶಾಸಕ ಕೆ ಎಂ ಶಿವಲಿಂಗೇಗೌಡ ಹಾಸನ ಶಾಸಕ ಪ್ರೀತಮ್ ಗೌಡರಿಗೆ ಕಿವಿಮಾತು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮುತ್ಸದ್ದಿ ರಾಜಕಾರಣಿ ಆಗಿರುವ ದೇವೇಗೌಡರು ಕೆಂಪುಕೋಟೆ ಮೇಲೆ ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ದೇವೇಗೌಡರ ಹಿರಿತನ ಹಾಗೂ ಅವರ ಅನುಭವ ರಾಜ್ಯ ರಾಜಕಾರಣಕ್ಕೆ ಅವಶ್ಯವಾಗಿದೆ ಎಂಬುದನ್ನ ಸಹೋದ್ಯೋಗಿಗಳಾಗಿರುವ ಪ್ರೀತಮ್ ಗೌಡರು ಅರಿತುಕೊಳ್ಳುವಂತೆ ಸಲಹೆ ನೀಡಿದರು.
ಸಂವಿಧಾನದ ಚೌಕಟ್ಟಿನ ಅಡಿಯಲ್ಲಿ ಬಹುಮತ ದಿಂದ ಆಯ್ಕೆಯಾಗುವ ಪಕ್ಷ ಸರ್ಕಾರ ರಚನೆ ಮಾಡುತ್ತದೆ ಆದರೆ ಚುನಾಯಿತ ಜನಪ್ರತಿನಿಧಿ ಆದಿಯಾಗಿ ಸರ್ಕಾರವನ್ನು ಪ್ರತಿನಿಧಿಸುವ ಮಂತ್ರಿ ಮುಖ್ಯಮಂತ್ರಿಗಳು ಒಂದು ಪಕ್ಷ ಅಥವಾ ಸಮುದಾಯಕ್ಕೆ ಮೀಸಲಾಗಿರುವುದಿಲ್ಲ ಆಡಳಿತ ಪ್ರತಿಪಕ್ಷ ಎಂದು ನೋಡದೆ ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಸರ್ವಸಮ್ಮತವಾಗಿ ನಿರ್ಧಾರ ಕೈಗೊಳ್ಳುವುದು ಜವಾಬ್ದಾರಿಯುತ ಸ್ಥಾನದಲ್ಲಿರುವವರ ಜವಬ್ದಾರಿಆಗಿರುತ್ತದೆ ಈ ನಿಟ್ಟಿನಲ್ಲಿ ಯೋಚಿಸಿದರೆ ದೇವೆಗೌಡರು ಹಾಗೂ ಬಸವರಾಜ ಬೊಮ್ಮಾಯಿಯವರ ಭೇಟಿ ರಾಜಕೀಯ ಕ್ಷೇತ್ರದಲ್ಲಿ ಸಹಜತೆಗೆ ವಿನಃ ವೈಯಕ್ತಿಕ ಲಾಭ ನಷ್ಟದ ಬಗ್ಗೆ ಯೋಚಿಸುವುದು ಸರಿಯಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಯುವಕರಾಗಿರುವ ಪ್ರೀತಮ್ ಗೌಡ ಅವರು ರಾಜಕೀಯವಾಗಿ ಬೆಳೆಯಲು ಸಾಕಷ್ಟು ಅವಕಾಶಗಳಿದೆ ಆದರೆ ದೇವೇಗೌಡರು ಸೇರಿದಂತೆ ಹಿರಿಯರ ಬಗ್ಗೆ ಮಾತನಾಡುವಾಗ ಸ್ವಲ್ಪ ಯೋಚಿಸಿ ಮಾತನಾಡುವಂತೆ ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಗಂಗಾಧರ್, ಗೀಜೀಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಧರ್ಮಶೇಖರ್, ಜೆಡಿಎಸ್ ಮುಖಂಡ ವೈ.ಕೆ.ದೇವರಾಜು, ಸಹ್ಯಾದ್ರಿ ಮತ್ತಿತರರು ಉಪಸ್ಥಿತರಿದ್ದರು.