ರಾಜಕೀಯ ಏಳಿಗೆ ಸಹಿಸಲಾಗದೆ ನಾನು ಈ ಹಿಂದೆ ಇದ್ದ ಪಕ್ಷದವರೆ ನನ್ನ ವಿರುದ್ಧ ದೂರು ಕೊಟ್ಟು ಜಾರಿ ನಿರ್ದೇಶನಾಲಯದಿಂದ ದಾಳಿ ಮಾಡಿಸಿದ್ದಾರೆ: ಜಮೀರ್ ಅಹಮದ್ ಖಾನ್

ಬೆಂಗಳೂರು, ಆ.9- ತಮ್ಮ ರಾಜಕೀಯ ಏಳಿಗೆ ಸಹಿಸಲಾಗದೆ ನಾನು ಈ ಹಿಂದೆ ಇದ್ದ ಪಕ್ಷದವರೆ ನನ್ನ ವಿರುದ್ಧ ದೂರು ಕೊಟ್ಟು ಜಾರಿ ನಿರ್ದೇಶನಾಲಯದಿಂದ ದಾಳಿ ಮಾಡಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಆರೋಪಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನಾಯಕರತ್ತ ಪರೋಕ್ಷವಾಗಿ ಬೆರಳು ತೋರಿಸಿದರು. ನಾನು ಯಾರ ಹೆಸರನ್ನು ಹೇಳಲು ಬಯಸುವುದಿಲ್ಲ. ಆದರೆ ಅವರಿಗೆ ನನ್ನ ಏಳಿಗೆಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಬಹುಶಃ ನಾನು ಇಷ್ಟು ಎತ್ತರಕ್ಕೆ ಬೆಳೆಯುತ್ತೇನೆ ಎಂದು ಅವರು ಅಂದುಕೊಂಡಿರಲಿಲ್ಲ. ಹಾಗಾಗಿ ದಾಳಿ ಮಾಡಿಸಿದ್ದಾರೆ ಎಂದು ಹೇಳಿದರು.

ನಾನು ಮನೆ ಕಟ್ಟಿರುವುದು ಅವರಿಗೆ ಕಣ್ಣು ಉರಿ ತರಿಸಿದೆ. ಅವರನ್ನು ಬಿಟ್ಟು ಬೇರೆ ಯಾರು ಮನೆ ಕಟ್ಟಬಾರದು. ಯಾರು ಬೆಳೆಯಬಾರದು ಎಂಬುದು ಅವರ ಉದ್ದೇಶ. ಅದಕ್ಕಾಗಿ ನಾನು ಮನೆ ಕಟ್ಟಿದ ಮಾಹಿತಿಯನ್ನು ಮುಂದಿಟ್ಟುಕೊಂಡು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ. ಅದರ ಆಧಾರದ ಮೇಲೆಯೇ ದಾಳಿ ನಡೆದಿದೆ ಎಂದು ಆರೋಪಿಸಿದ್ದಾರೆ.

ಜಾರಿ ನಿರ್ದೇಶನಾಲಯದಿಂದ ದಾಳಿ ನಡೆದರೆ ನಾನು ದುರ್ಬಲನಾಗುತ್ತೇನೆ ಎಂದು ಅವರು ಭಾವಿಸಿದ್ದಾರೆ. ನನ್ನ ರಾಜಕೀಯ ಭವಿಷ್ಯ ಮುಗಿಸಲು ಪ್ರಯತ್ನಿಸಿದ್ದಾರೆ. ಆದರೆ ನಾನು ಯಾರಿಗೂ ಹೆದರುವುದಿಲ್ಲ. ದಾಳಿ ಬಳಿಕ ನಾನು ಇನ್ನಷ್ಟು ಬಲಿಷ್ಠನಾಗಿದ್ದೇನೆ. ಯಾವುದೆ ತಪ್ಪು ಮಾಡದೇ ಇರುವುದರಿಂದ ಹೆದರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ನನ್ನ ಮನೆಯ ಮೇಲಿನ ದಾಳಿಗೂ ಐಎಂಎ ಹಗರಣಕ್ಕೂ ಸಂಬಂಧ ಇಲ್ಲ. ಈ ಹಿಂದೆ ಡಿ.ಕೆ.ಶಿವಕುಮಾರ್ ಅವರ ಮನೆಯ ಮೇಲೂ ದಾಳಿ ನಡೆಸಲಾಗಿತ್ತು.

ಅವರಿಗೂ ಐಎಂಎಗೂ ಯಾವುದೇ ಸಂಬಂಧ ಇರಲಿಲ್ಲ. ರಾಜಕೀಯವಾಗಿ ಬೆಳೆಯುತ್ತೇವೆ ಎಂಬ ಸಂದರ್ಭದಲ್ಲಿ ಈ ರೀತಿಯ ದಾಳಿಗಳು ನಡೆಸಲಾಗುತ್ತದೆ ಎಂದು ಹೇಳಿದರು.

ದಾಳಿ ನಡೆಸಿದ ಅಧಿಕಾರಿಗಳಿಗೆ ಶೇ.90ರಷ್ಟು ಮಾಹಿತಿ ನೀಡಿದ್ದೇನೆ. ಇನ್ನೂ ಶೇ.10ರಷ್ಟು ಮಾಹಿತಿಯನ್ನು 10 ದಿನಗಳ ಒಳಗೆ ನೀಡುವಂತೆ ಇಡಿ ಅಧಿಕಾರಿಗಳು ಮೌಖಿಕವಾಗಿ ತಿಳಿಸಿದ್ದಾರೆ. ಖುದ್ದು ಅವರೇ ಬ್ಯಾಂಕ್‍ಗೆ ಹೋಗಿ ಮಾಹಿತಿ ಕಲೆ ಹಾಕಿದ್ದಾರೆ. ಯಾವುದಕ್ಕೂ ನಾನು ಹೆದರುವುದಿಲ್ಲ ಎಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ