ಬೆಂಗಳೂರು,ಆ.6- ಸಚಿವ ಸ್ಥಾನ ಸಿಗದೆ ಅಸಮಾಧಾನ ತಣಿಯದೆ ಹೊಗೆಯಾಡುತ್ತಿರುವ ನಡುವೆ, ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವವರದು ಖಾತೆ ಖ್ಯಾತೆ ಆರಂಭವಾಗಿದೆ.
ಕೆಲ ಸಚಿವರು ಇಂತಹುದೇ ಖಾತೆ ಬೇಕು ಎಂದು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ವರಿಷ್ಠರ ಮಾರ್ಗದರ್ಶನದಂತೆ ಸಚಿವರ ಸಾಮಥ್ರ್ಯಕ್ಕೆ ತಕ್ಕಂತೆ ಖಾತೆ ಹಂಚಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.
ಸಾಕಷ್ಟು ಕಸರತ್ತಿನ ನಂತರ ಅಳೆದು-ತೂಗಿ ವರಿಷ್ಠರ ಮಾರ್ಗದರ್ಶನದಂತೆ ಸಚಿವ ಸಂಪುಟ ರಚಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ವರಿಷ್ಠರ ಸೂಚನೆಯಂತೆ ಖಾತೆ ಹಂಚಲು ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ. ಹೀಗಾಗಿ ಇದೀಗ ದೆಹಲಿ ವರಿಷ್ಠರ ನಿರ್ಧಾರದತ್ತ ನೂತನ ಸಚಿವರ ಚಿತ್ತ ಹರಿದಿದೆ.
ಈಗಾಗಲೇ ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ವಹಿಸಲಾಗಿದೆ. ಜೊತೆಗೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಕೊಠಡಿಗಳ ಹಂಚಿಕೆ ಸಹ ಮಾಡಲಾಗಿದೆ. ಇದೀಗ ಸಚಿವರು ಖಾತೆ ಹಂಚಿಕೆಯನ್ನೇ ಎದುರು ನೋಡುತ್ತಿದ್ದಾರೆ.
ಪ್ರಮುಖ ಖಾತೆಗಳಾಗಿರುವ ಗೃಹ, ಇಂಧನ, ಲೋಕೋಪಯೋಗಿ, ಜಲಸಂಪನ್ಮೂಲ, ಸಾರಿಗೆ, ಕಂದಾಯ, ಬೆಂಗಳೂರು ನಗರಾಭಿವೃದ್ಧಿ , ವಸತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾತ್ ರಾಜ್ ಸೇರಿದಂತೆ ಕೆಲವು ಖಾತೆಗಳ ಮೇಲೆ ಪ್ರಭಾವಿ ಸಚಿವರು ಕಣ್ಣಿಟ್ಟಿದ್ದಾರೆ.
ಯಡಿಯೂರಪ್ಪ ನೇತೃತ್ವದ ಕ್ಯಾಬಿನೆಟ್ನಲ್ಲಿ ಉಪಮುಖ್ಯಮಂತ್ರಿ ಜೊತೆಗೆ ಲೋಕೋಪಯೋಗಿ ಸಚಿವರಾಗಿದ್ದ ಗೋವಿಂದ ಕಾರಜೋಳ ಪುನಃ ಅದೇ ಖಾತೆ ನೀಡುವಂತೆ ಸಿಎಂ ಬಳಿ ಮನವಿ ಮಾಡಿದ್ದಾರೆ. ಬೃಹತ್ ನೀರಾವರಿ ಇಲಾಖೆ ಮೇಲೆ ಕೆ.ಎಸ್. ಈಶ್ವರಪ್ಪ, ಕಂದಾಯ ಇಲಾಖೆ ಮೇಲೆ ಅರಗ ಜ್ಞಾನೇಂದ್ರ ಕಣ್ಣಿಟ್ಟಿದ್ದಾರೆ.
ವಸತಿ ಸಚಿವರಾಗಿದ್ದ ವಿ.ಸೋಮಣ್ಣ ಅವರು ಕಂದಾಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿದ್ದ ಮುರುಗೇಶ್ ನಿರಾಣಿ ಇಂಧನ ಜೊತೆಗೆ ಬೃಹತ್ ನೀರಾವರಿ ಹಾಗೂ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಮೇಲೆ ಒಲವು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಹಿಂದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದ ಡಾ.ಕೆ.ಸುಧಾಕರ್, ನಗರಾಭಿವೃದ್ಧಿ ಸಚಿವ ಬೈರತಿಬಸವರಾಜ್, ಸಹಕಾರ ಸಚಿವರಾಗಿದ್ದ ಎಸ್.ಟಿ.ಸೋಮಶೇಖರ್ ಅದೇ ಖಾತೆಯಲ್ಲಿ ಮುಂದುವರಿಸಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಒಂದು ವಾರದ ನಂತರ, ಬೊಮ್ಮಾಯಿ ಬುಧವಾರ ತಮ್ಮ ಸಂಪುಟಕ್ಕೆ 29 ಸಚಿವರನ್ನು ಸೇರ್ಪಡೆ ಮಾಡಿಕೊಂಡಿದ್ದರು. ಅದರಲ್ಲಿ 23 ಮಂದಿ ಹಿಂದಿನ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದವರಾಗಿದ್ದು, 6 ಮಂದಿ ಹೊಸಬರಾಗಿದ್ದಾರೆ.
ಕೆಲವು ಮಂತ್ರಿಗಳು ಹಿಂದಿನ ಕ್ಯಾಬಿನೆಟ್ನಲ್ಲಿ ತಾವು ಹೊಂದಿದ್ದ ಖಾತೆಗಳನ್ನು ಉಳಿಸಿಕೊಳ್ಳಲು ಆಶಿಸುತ್ತಿದ್ದಾರೆ. ಇನ್ನೂ ಕೆಲವರು ದೊಡ್ಡ ಖಾತೆಗಳನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ಗೋವಿಂದ ಕಾರಜೋಳ ಹಾಗೂ ಕೆ.ಎಸ್.ಈಶ್ವರಪ್ಪರಂತಹ ಪಕ್ಷದ ಹಿರಿಯ ನಾಯಕರು ತಮ್ಮ ಹಿಂದಿನ ಖಾತೆಗಳನ್ನೇ ಪಡೆದುಕೊಳ್ಳಲು ಬಯಸುತ್ತಿದ್ದಾರೆ. ಈ ನಡುವೆ ಸಂಘ ಪರಿವಾರ ಸದಸ್ಯರಿಗೆ ದೊಡ್ಡ ಮಟ್ಟದ ಖಾತೆ ನೀಡಲು ಕೇಂದ್ರೀಯ ನಾಯಕತ್ವ ಹಾಗೂ ಆರ್ಎಸ್ಎಸ್ ಚಿಂತನೆ ನಡೆಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇದರಂತೆ ದಶಕಗಳಿಂದ ಸಂಘ ಪರಿವಾರದ ಜೊತೆಗಿದ್ದ ಇದೇ ಮೊದಲ ಬಾರಿಗೆ ಮಂತ್ರಿಗಳಾಗಿರುವ ವಿ.ಸುನೀಲ್ ಕುಮಾರ್ ಮತ್ತು ಬಿ.ಸಿ.ನಾಗೇಶ್ ಅವರಿಗೆ ದೊಡ್ಡ ಖಾತೆಗಳೇ ದೊರಕುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಪಕ್ಷಕ್ಕೆ ನೂತನವಾಗಿ ಸೇರ್ಪಡೆಗೊಂಡಿರುವ ಎಂ.ಟಿ.ಬಿ.ನಾಗರಾಜ್ ಮತ್ತು ಮುನಿರತ್ನ ಅವರಿಗೆ ಸಣ್ಣ ಮಟ್ಟದ ಖಾತೆ ಜವಾಬ್ದಾರಿಗಳನ್ನು ನೀಡಿ, ಶಶಿಕಲಾ ಜೊಲ್ಲೆ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಈ ನಡುವೆ ಸಚಿವರಾದ ಮುರುಗೇಶ್ ನಿರಾಣಿ ಮತ್ತು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ನಾರಾಯಣ್ ಅವರಿಗೆ ಒಂದಕ್ಕಿಂತ ಹೆಚ್ಚು ಸಚಿವಾಲಯಗಳ ಉಸ್ತುವಾರಿ ನೀಡುವ ಸಾಧ್ಯತೆಗಳಿವೆ.
ಸಚಿವರು-ಕ್ಷೇತ್ರ-ಸಂಭಾವ್ಯ ಖಾತೆಗಳು ಈ ಕೆಳಕಂಡಂತಿವೆ
1. ಬಸವರಾಜ ಬೊಮ್ಮಾಯಿ – ಹಣಕಾಸು, ಇಂಧನ, ಗುಪ್ತಚರ, ಒಳಾಡಳಿತ, ಜಲಸಂಪನ್ಮೂಲ.
2. ಕೆ.ಎಸ್.ಈಶ್ವರಪ್ಪ – ಗ್ರಾಮೀಣಾಭಿವೃದ್ಧಿ/ ಕಂದಾಯ.
3. ಗೋವಿಂದ ಕಾರಜೋಳ – ಸಮಾಜ ಕಲ್ಯಾಣ/ ಲೋಕೋಪಯೋಗಿ.
4 . ಆರ್.ಅಶೋಕ್ – ಗೃಹ/ಬೆಂಗಳೂರು ನಗರಾಭಿವೃದ್ಧಿ.
5 . ಬಿ.ಶ್ರೀರಾಮುಲು – ಸಮಾಜ ಕಲ್ಯಾಣ
6. ವಿ. ಸೋಮಣ್ಣ – ಕಂದಾಯ / ವಸತಿ
7.ಉಮೇಶ್ ಕತ್ತಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್.
8. ಎಸ್. ಅಂಗಾರ – ಬಂದರು, ಮೀನುಗಾರಿಕೆ.
9. ಜೆ.ಸಿ.ಮಾಧುಸ್ವಾಮಿ-ಕಾನೂನು ಮತ್ತು ಸಂಸದೀಯ/ಸಣ್ಣ ನೀರಾವರಿ.
10. ಅರಗ ಜ್ಞಾನೇಂದ್ರ-ಅರಣ್ಯ, ಪರಿಸರ.
11. ಡಾ.ಸಿ.ಎನ್.ಅಶ್ವತ್ಥ ನಾರಾಯಣ-ಉನ್ನತ ಶಿಕ್ಷಣ/ ಐಟಿ-ಬಿಟಿ.
12. ಸಿ.ಸಿ.ಪಾಟೀಲ್-ಸಣ್ಣ ಕೈಗಾರಿಕೆ/ ಗಣಿ ಮತ್ತು ಭೂ ವಿಜ್ಞಾನ.
13. ಆನಂದ್ ಸಿಂಗ್ – ಪ್ರವಾಸೋದ್ಯಮ.
14. ಕೋಟಾ ಶ್ರೀನಿವಾಸ ಪೂಜಾರಿ-ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ.
15. ಪ್ರಭು ಚವ್ಹಾಣ್ – ಪಶು ಸಂಗೋಪನೆ.
16. ಮುರುಗೇಶ್ ನಿರಾಣಿ-ಬೃಹತ್ ಮತ್ತು ಮಧ್ಯಮ ಕೈಗಾರಿಕಾ.
17. ಶಿವರಾಂ ಹೆಬ್ಬಾರ್-ಕಾರ್ಮಿಕ/ ಸಕ್ಕರೆ.
18. ಎಸ್.ಟಿ. ಸೋಮಶೇಖರ್ – ಸಹಕಾರ/ ವಸತಿ.
19. ಬಿ.ಸಿ.ಪಾಟೀಲ್ – ಕೃಷಿ.
20. ಬೈರತಿ ಬಸವರಾಜ್-ನಗರಾಭಿವೃದ್ಧಿ.
21. ಡಾ.ಕೆ.ಸುಧಾಕರ್-ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ.
22. ಕೆ.ಗೋಪಾಲಯ್ಯ-ಆಹಾರ ಮತ್ತು ನಾಗರಿಕ ಸರಬರಾಜು/ ಅಬಕಾರಿ.
23. ಶಶಿಕಲಾ ಜೊಲ್ಲೆ – ಮಹಿಳಾ ಮತ್ತು ಮಕ್ಕಳ ಕಲ್ಯಾಣ/ ಕನ್ನಡ ಮತ್ತು ಸಂಸ್ಕ ೃತಿ.
24. ಎಂ.ಟಿ.ಬಿ. ನಾಗರಾಜ್ – ವಸತಿ/ಸಾರಿಗೆ.
25. ನಾರಾಯಣ ಗೌಡ – ಸಣ್ಣ ನೀರಾವರಿ.
26. ಬಿ.ಸಿ.ನಾಗೇಶ್ – ಕನ್ನಡ ಮತ್ತು ಸಂಸ್ಕ ೃತಿ.
27.ಸುನೀಲ್ ಕುಮಾರ್-ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ.
28. ಹಾಲಪ್ಪ ಆಚಾರ್ – ಜವಳಿ, ವಕ್ಫ್/ ತೋಟಗಾರಿಕೆ.
29. ಶಂಕರ ಪಾಟೀಲ್ ಮುನೇನಕೊಪ್ಪ-ಪೌರಾಡಳಿತ.
30. ಮುನಿರತ್ನ-ಯುವಜನ, ಕ್ರೀಡೆ/ ಪ್ರವಾಸೋದ್ಯಮ.