ಆಡಳಿತಾರೂಢ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ

ಬೆಂಗಳೂರು,ಆ.4- ಬಹುನಿರೀಕ್ಷಿತ ಸಚಿವ ಸಂಪುಟ ರಚನೆಗೂ ಮುನ್ನವೇ ಆಡಳಿತಾರೂಢ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮತ್ತೊಂದು ತಲೆನೋವು ಎದುರಾಗಿದೆ.

ಈ ಬಾರಿಯ ಸಂಪುಟ ರಚನೆಯಲ್ಲಿ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ಆಸೆಯಿಟ್ಟುಕೊಂಡಿದ್ದ ಆಕಾಂಕ್ಷಿಗಳಿಗೆ ಕೊನೆ ಕ್ಷಣದಲ್ಲಿ ಕೈ ತಪ್ಪಿರುವುದರಿಂದ ಅನೇಕ ಶಾಸಕರು ಸಿಡಿದೆದ್ದಿದ್ದಾರೆ.

ಸುಮಾರು 20ಕ್ಕೂ ಹೆಚ್ಚು ಶಾಸಕರು ಬಹಿರಂಗವಾಗಿಯೇ ಪಕ್ಷದ ವರಿಷ್ಠರು, ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ರಾಜ್ಯ ಉಸ್ತುವಾರಿ ಅರುಣ್‍ಸಿಂಗ್ ಸೇರಿದಂತೆ ಹಿರಿಯ ನಾಯಕರ ಮೇಲೆ ಕೆಂಡಕಾರಿದ್ದಾರೆ.

ಅದರಲ್ಲೂ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟು ವಂಚಿತರಾಗಿ ಇದೀಗ ಸಚಿವ ಸ್ಥಾನವೂ ಕೈ ತಪ್ಪಿರುವ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್, ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ, ಎಸ್.ಎ.ರವೀಂದ್ರನಾಥ್, ಹರತಾಳ ಹಾಲಪ್ಪ, ಕುಮಾರ್ ಬಂಗಾರಪ್ಪ, ರಾಜೂಗೌಡ ನಾಯಕ್, ಶಿವನಗೌಡ ನಾಯಕ್, ಸೋಮಶೇಖರರೆಡ್ಡಿ, ದತ್ತಾತ್ರೇಯ ಪಾಟೀಲ್ ರೇವೂರ, ರಾಜ್‍ಕುಮಾರ್ ಪಾಟೀಲ್ ತೇಲ್ಕೂರ್, ದುರ್ಯೋಧನ ಐಹೊಳೆ, ಎಸ್.ಎ.ರಾಮದಾಸ್, ರಾಜೀವ್, ನೆಹರು ಓಲೇಕರ್, ಆರ್.ಶಂಕರ್, ಶ್ರೀಮಂತಪಾಟೀಲ್, ನಾಗೇಶ್ ಸೇರಿದಂತೆ ಅನೇಕರು ಅಸಮಾಧಾನಗೊಂಡಿದ್ದಾರೆ.

ವಿಧಾನಸಭೆಯ ಉಪಸಭಾಧ್ಯಕ್ಷ ಆನಂದ್ ಮಹಮನಿ ಅವರು ನನಗೆ ಮಂತ್ರಿ ಸ್ಥಾನ ನೀಡದಿದ್ದರೆ ಶಾಸಕ ಸ್ಥಾನ ಹಾಗೂ ಉಪಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ.

ನನಗೆ ಕಳೆದ ಬಾರಿಯೇ ಸಚಿವ ಸ್ಥಾನ ನೀಡುವ ಆಶ್ವಾಸನೆ ನೀಡಲಾಗಿತ್ತು. ಆದರೆ, ಈವರೆಗೂ ನನಗೆ ದೂರವಾಣಿ ಕರೆ ಬಂದಿಲ್ಲ. ಒಂದು ವೇಳೆ ಸಚಿವ ಸ್ಥಾನ ಕೊಡದಿದ್ದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ.

ಖಾಸಗಿ ಕಾರಿನಲ್ಲಿ ಕ್ಷೇತ್ರಕ್ಕೆ ತೆರಳಿ ಜನ ಸೇವೆ ಮಾಡುತ್ತೇನೆ ಎನ್ನುವ ಮೂಲಕ ಬಂಡಾಯದ ಬಾವುಟ ಹಾರಿಸಿದ್ದಾರೆ.

ಹಾವೇರಿ ಶಾಸಕ ನೆಹರು ಓಲೇಕರ್ ನನಗೆ ಸಚಿವ ಸ್ಥಾನ ತಪ್ಪಿಸಿದ್ದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು. ಮೋಸ, ವಂಚನೆ, ದಗಲ್‍ಬಾಜಿ ಮಾಡುವವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ. ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆದರೆ, ನನ್ನಂತ ಹಿರಿಯನಿಗೆ ಸಚಿವ ಸ್ಥಾನ ನೀಡದಿದ್ದರೆ ಇನ್ಯಾರಿಗೆ ಕೊಡುತ್ತಾರೆ ಎಂದು ಪ್ರಶ್ನಿಸಿದರು.

ಇನ್ನು ವಿಧಾನಪರಿಷತ್ ಸದಸ್ಯ ಆರ್.ಶಂಕರ್ ಕೂಡ ಅಸಮಾಧಾನಗೊಂಡಿದ್ದಾರೆ. ನಾನು ಬಿಜೆಪಿಯನ್ನು ನಂಬಿದ್ದಕ್ಕೆ ಇಂತಹ ಸ್ಥಿತಿ ಬಂದಿದೆ. ಮಂತ್ರಿ ಸ್ಥಾನ ತ್ಯಜಿಸಿ ಪಕ್ಷಕ್ಕೆ ಬೆಂಬಲ ಕೊಟ್ಟಿದ್ದೆ. ಆದರೆ, ಈಗ ನನಗೆ ಮಂತ್ರಿ ಸ್ಥಾನ ತಪ್ಪಿಸುವ ಹುನ್ನಾರ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಬಸವನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್, ರೇಣುಕಾಚಾರ್ಯ ಸೇರಿದಂತೆ ಅನೇಕರು ಒಳಗೊಳಗೆ ಕುದಿಯುತ್ತಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿ ಈ ಅಸಮಧಾನವನ್ನು ಹೇಗೆ ನಿಭಾಯಿಸುತ್ತದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ