ಬೆಂಗಳೂರು,ಜು.25- ಕಳೆದ ಹಲವು ತಿಂಗಳಿನಿಂದ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವ ಬದಲಾವಣೆಗೆ ಇಂದೇ ಮುಹೂರ್ತ ನಿಗದಿಯಾಗಲಿದ್ದು, ಬಹುತೇಕ ರಾಜೀನಾಮೆ ನೀಡುವುದು ಖಚಿತವಾಗಿದೆ.
ಸಂಜೆ ದೆಹಲಿ ವರಿಷ್ಠರು ರಾಜೀನಾಮೆ ನೀಡುವಂತೆ ಸಿಎಂ ಬಿಎಸ್ವೈಗೆ ಸೂಚಿಸಲಿದ್ದು, ದೆಹಲಿ ಸಂದೇಶದತ್ತ ಎಲ್ಲರ ಚಿತ್ತ ನೆಟ್ಟಿದೆ.
ಒಂದು ವೇಳೆ ರಾಜೀನಾಮೆ ನೀಡುವಂತೆ ಸೂಚನೆ ಕೊಟ್ಟರೆ ನಾಳೆ ಮಧ್ಯಾಹ್ನ 3 ಗಂಟೆಗೆ ಯಡಿಯೂರಪ್ಪನವರು ರಾಜಭವನಕ್ಕೆ ತೆರಳಿ ರಾಜ್ಯಪಾಲ ತಾವರ್ ಚಂದ್ರ ಗೆಲ್ಹೋಟ್ ಅವರನ್ನು ಭೇಟಿಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ.
ಈ ಮೂಲಕ ಯಡಿಯೂರಪ್ಪನವರ ಎರಡು ವರ್ಷಗಳ ಅಧಿಕಾರ ಬಹುತೇಕ ನಾಳೆಯೇ ಕೊನೆಗೊಳ್ಳುವ ಲಕ್ಷಣಗಳು ಗೋಚರಿಸಿವೆ.
ಬೆಳಗಾವಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಸಂಜೆ ದೆಹಲಿ ವರಿಷ್ಠರಿಂದ ಸಂದೇಶ ಬರಲಿದೆ. ಅವರು ಏನು ನಿರ್ದೇಶನ ನೀಡುತ್ತಾರೋ ಅದರಂತೆ ನಡೆಯುತ್ತೇನೆ. ಮಾಧ್ಯಮದವರಿಗೆ ಎಲ್ಲವೂ ತಿಳಿಯಲಿದೆ. ಹೈಕಮಾಂಡ್ನ ಸಂದೇಶ ನೋಡಿಕೊಂಡು ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ ಎಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ದೆಹಲಿ ವರಿಷ್ಠರು ಕೂಡ ಹೆಚ್ಚು ದಿನ ಕಾಯುವ ಅವಕಾಶಗಳು ತೀರಾ ವಿರಳವಾಗಿದ್ದು, ನಾಳೆ ಸರ್ಕಾರಕ್ಕೆ ಎರಡು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವಂತೆ ಬಿಎಸ್ವೈಗೆ ಸೂಚನೆ ನೀಡಲಿದ್ದಾರೆ ಎನ್ನಲಾಗುತ್ತಿದೆ.
ಈಗಾಗಲೇ ಯಡಿಯೂರಪ್ಪನವರೇ ಸ್ಪಷ್ಟಪಡಿಸಿರುವಂತೆ, ನಾನು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎನ್ನುತ್ತಿರುವುದರಿಂದ ಯಾವುದೇ ಗೊಂದಲಗಳಿಲ್ಲದೆ , ಶಕ್ತಿ ಪ್ರದರ್ಶನವನ್ನೂ ನಡೆಸದೆ ನೇರವಾಗಿ ರಾಜಭವನಕ್ಕೆ ತೆರಳಿ ರಾಜೀನಾಮೆ ಪತ್ರ ನೀಡುವ ಲಕ್ಷಣಗಳು ಹೆಚ್ಚಾಗಿದೆ.
ಇನ್ನೊಂದು ಮೂಲದ ಪ್ರಕಾರ ಆಗಸ್ಟ್ 9ರ ನಂತರ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಂತರ ನೀವು ಯಾರನ್ನ ಬೇಕಾದರೂ ಮುಖ್ಯಮಂತ್ರಿ ಮಾಡಿ ಎಂದು ಹೈಕಮಾಂಡ್ ನಾಯಕರಿಗೆ ಸಿಎಂ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಇದನ್ನು ಒಪ್ಪದಿರುವ ಹೈಕಮಾಂಡ್, ನಾಳೆಯೊಳಗೆ ರಾಜೀನಾಮೆ ಕೊಡುವಂತೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
ಒಂದು ವೇಳೆ ನಾಳೆ ಸಿಎಂ ರಾಜೀನಾಮೆ ಸಲ್ಲಿಸಿದರೆ ಹೊಸ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗುವವರೆಗೂ ಯಡಿಯೂರಪ್ಪನವರೇ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುವ ಸಂಭವವಿದೆ. ಸದ್ಯ ಆಷಾಢ ಇರುವ ಕಾರಣ ಸಂಪ್ರದಾಯ, ಆಚಾರವಿಚಾರಗಳನ್ನು ಹೆಚ್ಚಾಗಿ ನಂಬುವ ಬಿಜೆಪಿ ನಾಯಕರು ಆಷಾಢದಲ್ಲೇ ಹೊಸ ಸಾರಥಿಯನ್ನು ಆಯ್ಕೆ ಮಾಡುವ ಲಕ್ಷಣಗಳು ತೀರ ವಿರಳವಾಗಿದೆ.
ಆ.10ರ ನಂತರ ಕರ್ನಾಟಕಕ್ಕೆ ಹೊಸ ಮುಖ್ಯಮಂತ್ರಿ ಅಭ್ಯರ್ಥಿಯ ಆಯ್ಕೆ ನಡೆಯಲಿದೆ. ದೆಹಲಿಯಿಂದ ವೀಕ್ಷಕರು ಆಗಮಿಸಲಿದ್ದು, ಶಾಸಕಾಂಗ ಸಭೆ ಕರೆದು ಎಲ್ಲರ ಅಭಿಪ್ರಾಯಪಡೆದು ಬಳಿಕವಷ್ಟೇ ಹೊಸ ನಾಯಕನ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಈ ಪ್ರಕ್ರಿಯೆ ನಡೆಯಲು ಇನ್ನು ಸರಿಸುಮಾರು ಎರಡು ವಾರಗಳ ಕಾಲ ಬೇಕಾಗಿರುವುದರಿಂದ ಕರ್ನಾಟಕದಲ್ಲಿ ಸದ್ಯ ಉಂಟಾಗಿರುವ ರಾಜಕೀಯ ಹೈಡ್ರಾಮ ಇನ್ನೂ ಮುಂದುವರೆಯುವ ಸಂಭವ ಹೆಚ್ಚಾಗಿದೆ.
ಮುಂದುವರೆದ ಗೊಂದಲ:
ಇನ್ನೊಂದು ಮೂಲದ ಪ್ರಕಾರ ಯಡಿಯೂರಪ್ಪನವರಿಗೆ ಸಂಜೆಯೇ ವರಿಷ್ಠರು ರಾಜೀನಾಮೆ ನೀಡಲು ಸೂಚನೆ ನೀಡುತ್ತಾರೋ ಇಲ್ಲವೋ ಎಂಬ ಗೊಂದಲ ಹಾಗೆಯೇ ಉಳಿದಿದೆ.
ಪ್ರಸ್ತುತ ರಾಜ್ಯದ ನಾನಾ ಕಡೆ ಭಾರೀ ಮಳೆ ಉಂಟಾಗಿ ಅನೇಕ ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ. ಮುಖ್ಯಮಂತ್ರಿಗಳೇ ರಾಜೀನಾಮೆ ನೀಡಿದರೆ ಸರ್ಕಾರವೇ ಇಲ್ಲದಂತಾಗುತ್ತದೆ. ಪ್ರತಿಪಕ್ಷಗಳು ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಮುಗಿಬೀಳಬಹುದೆಂಬ ಹಿನ್ನೆಲೆಯಲ್ಲಿ ಕೆಲ ದಿನಗಳ ಮಟ್ಟಿಗೆ ರಾಜೀನಾಮೆ ಪ್ರಹಸನವನ್ನು ಮುಂದೂಡಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.
ಆದರೆ ಯಡಿಯೂರಪ್ಪನವರ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ನಾಳೆ ರಾಜೀನಾಮೆ ನೀಡಲು ಮಾನಸಿಕವಾಗಿ ಸಿದ್ದರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ದೆಹಲಿ ವರಿಷ್ಠರಿಂದ ಇಂದೇ ಸಂದೇಶ ಬರುತ್ತದೆಯೋ ಎಂಬುದರ ಬಗ್ಗೆ ರಾಜ್ಯ ನಾಯಕರಿಗೂ ಕೂಡ ಯಾವುದೇ ಮಾಹಿತಿ ಇಲ್ಲ. ಹೀಗಾಗಿ ಕಳೆದ ಹಲವು ದಿನಗಳಿಂದ ಉಂಟಾಗಿರುವ ಗೊಂದಲದ ವಾತಾವರಣ ಈಗಲೂ ಕೂಡ ಮುಂದುವರೆದಿದೆ.