ಟೋಕಿಯೊದಲ್ಲಿ ನಡೆಯುತ್ತಿರುವ ಒಲಂಪಿಕ್‍ನಲ್ಲಿ ಭಾರತದ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗಳಿಸುವ ಮೂಲಕ ಭಾರತದ ಖಾತೆ ತೆರೆದಿದ್ದಾರೆ

ಟೋಕಿಯೊ, ಜು.24- ಜಪಾನ್‍ನ ಟೋಕಿಯೊದಲ್ಲಿ ನಡೆಯುತ್ತಿರುವ ಒಲಂಪಿಕ್‍ನಲ್ಲಿ ಭಾರತದ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗಳಿಸುವ ಮೂಲಕ ಭಾರತದ ಖಾತೆ ತೆರೆದಿದ್ದಾರೆ.

ಜುಲೈ 22ರಿಂದ ಆರಂಭವಾದ ಕ್ರೀಡಾಕೂಟದಲ್ಲಿ ಇಂದು ಭಾರತದ ಕ್ರೀಡಾಪಟು ಮೀರಾ ಬೆಳ್ಳಿ ಜಯಿಸುವ ಮೂಲಕ ಮತ್ತಷ್ಟು ಪದಕಗಳ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. 26 ವರ್ಷದ ಮಣಿಪುರದ ವೇಟ್‍ಲಿಫ್ಟರ್ ಮೀರಾಬಾಯಿ ಚಾನು 49 ಕೆಜಿ ವಿಭಾಗದಲ್ಲಿ ಸ್ಫರ್ಧಿಸಿದ್ದರು. ಮೊದಲ ಮತ್ತು ಎರಡನೇ ಪ್ರಯತ್ನದಲ್ಲಿ ಉದ್ದೇಶಿತ ಭಾರವನ್ನು ಎತ್ತುವ ಮೂಲಕ ಬೆಳ್ಳಿಯನ್ನು ಕೊರಳಿಗೇರಿಸಿಕೊಂಡಿದ್ದಾರೆ.

ಈ ಮೂಲಕ ವೈಟ್‍ಲಿಫ್ಟಿಂಗ್‍ನಲ್ಲಿ ಎರಡು ದಶಕಗಳ ಬಳಿಕ ಪದಕ ಗಳಿಸಿದೆ. 87 ಕೆಜಿ ಸ್ನ್ಯಾಚ್, 115 ಕೆ.ಜಿ.ಜರ್ಕ್ ಸೇರಿ ಒಟ್ಟು 202 ಕೆಜಿ ತೂಕವನ್ನು ಮೀರಾಬಾಯಿ ಎತ್ತಿದ್ದಾರೆ. 2000ರಲ್ಲಿ ಸಿಡ್ನಿಯಲ್ಲಿ ಕಂಚು ಗೆದ್ದಿದ್ದ ಕರ್ಣಂ ಮಲ್ಲೇಶ್ವರಿಗಿಂತಲೂ ಮೀರಾಬಾಯಿ ಹೆಚ್ಚಿನ ತೂಕ ಎತ್ತಿದ್ದಾರೆ. 2016ರಲ್ಲಿ ತಯಾರಿ ನಡೆಸುವಾಗ ಹಿಮ್ಮಡಿ ಉಳುಕಿನಿಂದ ಸಂಕಷ್ಟ ಅನುಭವಿಸುತ್ತಿದ್ದರೂ ಅದನ್ನು ಲೆಕ್ಕಿಸದೆ ಒಲಿಂಪಿಕ್‍ನಲ್ಲಿ ಸಾಧನೆ ಮಾಡಿದ್ದಾರೆ. ಕಳೆದ ವರ್ಷದ ಭಾರತದ ಚಾಂಪಿಯನ್ ಆಗಿದ್ದರು. ಇಂದು ಬೆಳಗ್ಗೆ ಟೋಕಿಯೊದಲ್ಲಿ 87 ಕೆಜಿ ಸ್ನ್ಯಾಚ್ ಮಾಡಿದ್ದಾರೆ. ಎರಡನೇ ಪ್ರಯತ್ನದಲ್ಲಿ 89 ಕೆಜಿ ಎತ್ತಲು ವಿಫಲರಾಗಿದ್ದಾರೆ. ಕಳೆದ ವರ್ಷ ರಾಷ್ಟ್ರೀಯ ಚಾಂಪಿಯನ್‍ಷಿಪ್ ಸ್ಪರ್ಧೆಯಲ್ಲಿ 89 ಕೆಜಿ ಸ್ನ್ಯಾಚ್ ಮಾಡಿದ್ದ ಮೀರಾಬಾಯಿ ಒಲಿಂಪಿಕ್‍ನಲ್ಲಿ ಕೊನೆಯ ಸ್ನ್ಯಾಚ್‍ನಲ್ಲಿ ವಿಫಲತೆ ಅನುಭವಿಸಿದರು. ಆದರೆ ಇದಕ್ಕೂ ಮೊದಲು ಯಶಸ್ವಿಯಾಗಿ 87 ಕೆಜಿಯನ್ನೇ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ. ಜರ್ಕ್ ವಿಭಾಗದಲ್ಲಿ 110 ಮತ್ತು 115 ಕೆಜಿಯನ್ನು ಮೊದಲ ಮತ್ತು ಎರಡನೇ ಪ್ರಯತ್ನದಲ್ಲಿ ಯಶಸ್ವಿಗೊಳಿಸಿದರು. ಮೂರನೇ ಸುತ್ತಿಗೆ 117 ಕೆಜಿ ಭಾರ ಹಾಕಿಸಿಕೊಂಡರಾದರೂ ಯಶಸ್ವಿಯಾಗಿಲ್ಲ. ಅಂತಿಮವಾಗಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.

210 ಕೆಜಿ ಭಾರ ಎತ್ತಿದ ಚೀನಾದ ಹೂ ಝೀಯಿ ಚಿನ್ನ ಗೆದ್ದರೆ, 194 ಭಾರ ಎತ್ತಿದ ಇಂಡೋನೇಷಿಯಾದ ಆಯಿಶಾ ವಿಂಡಿ ಕ್ಯಾಂಟಿಕಾ ಕಂಚಿನ ಪದಕ ಗೆದ್ದಿದ್ದಾರೆ.

ಮೀರಾಬಾಯಿ ಅವರ ಯಶಸ್ಸನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಪದಕ ಗೆದ್ದ ತಕ್ಷಣ ಟ್ವಿಟ್ ಮಾಡಿರುವ ಅವರು ಭಾರತದ ಪದಕದ ಆಸೆಗಳೂ ಇನ್ನೂ ಇವೆ ಎಂದಿದ್ದಾರೆ. ರಾಷ್ಟ್ರಪತಿಯವರು ಕೂಡ ಮೀರಾ ಬಾಯಿ ಚಾನು ಅವರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದು 20 ವರ್ಷಗಳ ಬಳಿಕ ಪದಕ ತಂದು ಕೊಡುವ ಮೂಲಕ ಕಾಯುವಿಕೆಯನ್ನು ಕೊನೆಗಾಣಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಳ್ಳಿ ಗೆದ್ದ ಬಳಿಕ ಹರ್ಷ ವ್ಯಕ್ತಪಡಿಸಿರುವ ಮೀರಾ ಬಾಯಿ ಅವರು ಇದು ನನ್ನ ಐದು ವರ್ಷಗಳ ಕನಸು ನನಸಾಗಿರುವ ಬಗ್ಗೆ ತುಂಬಾ ಸಂತೋಷವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ