![Murugesh Niranijpg](http://kannada.vartamitra.com/wp-content/uploads/2021/07/Murugesh-Niranijpg-678x678.jpg)
ಕಲಬುರಗಿ,ಜು.24-ನಾನು ಮುಖ್ಯಮಂತ್ರಿ ಸ್ಥಾನಕ್ಕೆ ವರಿಷ್ಠರ ಬಳಿ ಯಾವುದೇ ರೀತಿಯ ಲಾಬಿ ನಡೆಸಿಲ್ಲ. ಹೈಕಮಾಂಡ್ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಬದ್ದರಾಗಿರುತ್ತೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತ. ವರಿಷ್ಠರ ಆದೇಶವನ್ನು ಪಾಲನೆ ಮಾಡುವುದು ನಮ್ಮ ಕರ್ತವ್ಯ. ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು ಇಲ್ಲಿ ಹುದ್ದೆಗಾಗಿ ಬೇರೆ ಪಕ್ಷದಂತೆ ಲಾಬಿ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಗಲೂ ನಮ್ಮ ನಾಯಕರು. ಮುಂದೆಯೂ ಕೂಡ ಅವರೇ ನಮ್ಮ ಸಾರಥಿ. ನಮ್ಮ ಹೈಕಮಾಂಡ್ ಅತ್ಯಂತ ಪ್ರಬಲವಾಗಿದ್ದು, ಯಾರಿಗೆ ಯಾವ ಸ್ಥಾನವನ್ನು, ಯಾವ ಸಂದರ್ಭದಲ್ಲಿ ನೀಡಬೇಕೆಂಬುದನ್ನು ತೀರ್ಮಾನಿಸುತ್ತಾರೆ ಎಂದರು.
ನಾನು ಯಾವುದೇ ಹುದ್ದೆಗಾಗಿ ಲಾಬಿ ಮಾಡುತ್ತಿಲ್ಲ, ರಾಷ್ಟ್ರಿಯ ನಾಯಕರು ಅಳೆದೂ ತೂಗಿ ಅರ್ಹರನ್ನೇ ಸಿಎಂ ಮಾಡುತ್ತಾರೆ. ನನಗೆ ಪಕ್ಷ ವಹಿಸುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ಸ್ಥಾನಮಾನಕ್ಕಾಗಿ ನಾನು ಯಾವತ್ತೂ ಲಾಬಿ ಮಾಡಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಬಿಜೆಪಿಯ 120 ಶಾಸಕರೆಲ್ಲರೂ ಸಿಎಂ ಹುದ್ದೆಗೆ ಅರ್ಹತೆ ಹೊಂದಿದ್ದಾರೆ. ನಿರೀಕ್ಷೆಯಿಲ್ಲದೆ ಪಕ್ಷ ನನಗೆ ಹಲವು ಜವಾಬ್ದಾರಿ ನೀಡಿದೆ. ಮೊದಲ ಬಾರಿ ಶಾಸಕನಾದಾಗಲೇ ಹೈಕಮಾಂಡ್ ನನ್ನನ್ನು ಸಚಿವನನ್ನಾಗಿ ಮಾಡಿದೆ. ಈಗಲೂ ಮಹತ್ವದ ಜವಾಬ್ದಾರಿ ಕೊಟ್ಟಿದೆ. ಹಿಂದೆಯೂ ನಾನು ಯಾವುದೇ ಹುದ್ದೆ ಅಪೇಕ್ಷೆ ಮಾಡಿದವನಲ್ಲ, ಈಗಲೂ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ಅಧಿಕೃತವಾಗಿ ಈವರೆಗೆ ಯಾವುದೇ ಸೂಚನೆ ಬಂದಿಲ್ಲ. ಯಡಿಯೂರಪ್ಪನವರೇ ನಮ್ಮ ನಾಯಕರು. ಅವರ ಜೊತೆ ನಾವಿರುತ್ತೇವೆ ಎಂದು ಬೆಂಬಲ ಸೂಚಿಸಿದರು.
ನನ್ನನ್ನೇ ಮುಖ್ಯಮಂತ್ರಿ ಮಾಡಿ ಎಂದು ನಾನು ಹೈಕಮಾಂಡ್ ಬಳಿ ಲಾಬಿ ಮಾಡುವುದಿಲ್ಲ . ಯಾರನ್ನು ಈ ಸ್ಥಾನಕ್ಕಾಗಿ ಕೂರಿಸಬೇಕೆಂದು ನಮ್ಮ ವರಿಷ್ಠರು ತೀರ್ಮಾನಿಸುತ್ತಾರೆ. ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದರಾಗಬೇಕೆಂದು ಹೇಳಿದರು.
ವಿಶೇಷ ಅರ್ಥ ಬೇಡ: ನಾನು ಚಿಕ್ಕನಿಂದಲೂ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆಯುವುದನ್ನು ರೂಢಿಸಿಕೊಂಡು ಬಂದಿದ್ದೇನೆ. ಈಗಲೂ ಅಷ್ಟೆ. ಸಾಮಾನ್ಯವಾಗಿ ತಿಂಗಳು – ಎರಡು ತಿಂಗಳಿಗೊಮ್ಮೆ ದೇವಸ್ಥಾನಕ್ಕೆ ಹೋಗಿಬರುತ್ತೇನೆ. ಅದರಂತೆಯೇ ನಾನು ವಾರಣಾಸಿಗೆ ಹೋಗಿದ್ದೆ. ಇದಕ್ಕೂ, ರಾಜಕೀಯಕ್ಕೂ ಸಂಬಂಧವಿಲ್ಲ. ಯಾವುದೇ ಅರ್ಥ ಕಲ್ಪಿಸುವುದು ಬೇಡ ಎಂದರು.
ಮತದಾರರು ನಮಗೆ ವೋಟು ಹಾಕಿ ಆರಿಸಿ ಕಳಿಸಿದ್ದಾರೆ. ಅವರ ನಿರೀಕ್ಷೆಯಂತೆ ಕೆಲಸ ಮಾಡುವುದೊಂದೇ ನನ್ನ ಮೂಲ ಉದ್ದೇಶ ಎಂದರು.
ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು ಪ್ರವಾಹದಿಂದ ಮುಳುಗುವ ಹಳ್ಳಿಗಳನ್ನು ಸ್ಥಳಾಂತರ ಮಾಡಲಾಗುವುದು. ಜನ ಮತ್ತು ಜಾನುವಾರು ರಕ್ಷಣೆಗೆ ಜಿಲ್ಲಾಡಳಿತ ಎಲ್ಲ ರೀತಿಯಲ್ಲೂ ಪರಿಹಾರ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯಾದ್ಯಂತ ಇನ್ನು ಮೂರು ದಿನ ಹೆಚ್ಚಿನ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಯವಿಟ್ಟು ಸಾರ್ವಜನಿಕರು ತಗ್ಗುಪ್ರದೇಶ ಇಲ್ಲವೇ ನದಿಪಾತ್ರಗಳಲ್ಲಿದ್ದರೆ ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.