ಪ್ರವಾಹದ ಆತಂಕದಲ್ಲಿ ಉತ್ತರದ ಜನ: ಉಕ್ಕೇರಿದ ಮಹಾರಾಷ್ಟ್ರದ ನದಿಗಳು ಮಳೆ, ಅಬ್ಬರದಿಂದ ಸುಗಮ ಜೀವನಕ್ಕೆ ಅಡ್ಡಿ

ಬೆಳಗಾವಿ : ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಹಾಗೂ ಜಿಲ್ಲೆಯಲ್ಲಿ ಎರಡು ದಿನದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಜನರು ಮತ್ತೆ ಪ್ರವಾಹದ ಭೀತಿ ಎದುರಾಗಿದೆ.

ಗಡಿ ಜಿಲ್ಲೆಯ ಭಾಗದ ತಾಲೂಕಗಳಾದ ಚಿಕ್ಕೋಡಿ, ಕಾಗವಾಡ,ರಾಯಭಾಗ, ಅಥಣಿ, ಹುಕ್ಕೇರಿ, ಖಾನಾಪುರ, ಬೆಳಗಾವಿ ನಿಪ್ಪಾಣಿ ಭಾಗದಲ್ಲಿ ಧಾರಾಕಾರ ಮಳೆಯಿಂದಾಗಿ ಕೃಷ್ಣಾ ನದಿ ಈಗ ಮೈದುಂಬಿ ಹರಿಯುತ್ತಿದೆ.

ಪಶ್ಚಿಮ ಘಟ್ಟದ ನಿರಂತರವಾದ ಮಳೆಗೆ ಕೃಷ್ಣಾ ನದಿಗೆ ಈಗ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಇದರಿಂದ ನದಿಯ ಒಳಹರಿವು ಹೆಚ್ಚಳವಾಗಿದೆ. ಈಗಾಗಲೇ ಚಿಕ್ಕೋಡಿಯಲ್ಲಿ ನಾಲ್ಕು ಸೇತುವೆಗಳು ಜಲಾವೃತಗೊಂಡಿವೆ.

ನದಿ ಪಾತ್ರದಲ್ಲಿ ಎಚ್ಚರಿಕೆ:
ದೂಧ್‍ಗಂಗಾ ನದಿಯ ಮಲಿಕವಾಡ-ದತ್ತವಾಡ ಮತ್ತು ಕೃಷ್ಣಾ ನದಿಯ ಯಡೂರ ಕಲ್ಲೋಳ, ಭೀವಸಿ-ಜತ್ರಾಟ ,ಅಕ್ಕೋಳ ಸಿದ್ನಾಳ ಸೇರಿದಂತೆ ನಾಲ್ಕು ಸೇತುವೆಗಳು ಜಲಾವೃತಗೊಂಡಿವೆ. ಜಿಲ್ಲಾಕಾರಿ ಆದೇಶದಂತೆ ನದಿ ತೀರ ಭಾಗದ ಪ್ರದೇಶದ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ನದಿಗಳ ಹೊರ ಹರಿವು:
ರಾಜಾಪೂರ ಬ್ಯಾರೇಜ್‍ನಿಂದ 58,000 ಕ್ಯೂಸೆಕ್ ಮತ್ತು ದೂಧ್‍ಗಂಗಾ ನದಿಯಿಂದ 19,768 ಕ್ಯೂಸೆಕ್ ಒಟ್ಟು 77,768 ಕ್ಯೂಸೆಕ್ ನಷ್ಟು ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಹಿಪ್ಪರಗಿ ಜಲಾಶಯದಿಂದ 74,000 ಕ್ಯೂಸೆಕ್ ಹೊರ ಬಿಡುತ್ತಿದ್ದಾರೆ.

ನೀರಿನಲ್ಲೇ ನಿಂತ ಕಾರು, ಬೈಕ್:
ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 4, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಗೋವಾ ಗೇಟ್ ಹೋಟೆಲ್ ಬಳಿಯ ಹೆದ್ದಾರಿ ನದಿಯಾಗಿ ಪರಿವರ್ತನೆಗೊಂಡಿದೆ. ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಯಿಂದ ಕಾರು ಮತ್ತು ಬೈಕ್ ಸವಾರರು ಮುಂದೆ ಹೋಗಲಾಗದೆ ನಿಂತಲ್ಲೆ ನಿಂತಿರುವ ದೃಶ್ಯ ಕಂಡು ಬಂದಿತು.

ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ವ್ಯಾಪಾರ ವಹಿವಾಟು ಸ್ಥಗಿತಗೊಂಡು ಜನರು ಮನೆಯಿಂದ ಹೊರಬರುತ್ತಿಲ್ಲ. ಜಿಲ್ಲೆಯ ಅನೇಕ ಭಾಗಗಳಲ್ಲಿ ಮನೆಗಳ ಗೋಡೆಗಳು ಕುಸಿದ ಕುರಿತು ವರದಿಯಾಗಿವೆ.

ಉತ್ತರದ ನದಿಗಳಿಂದ ಸಂಚಾರ ಸ್ಥಗಿತ
ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ದಿನ ಬಿಡುವು ನೀಡಿದ್ದ ಮಳೆ ಗುರುವಾರ ಮತ್ತೆ ಅಬ್ಬರಿಸಲಾರಂಭಿಸಿದೆ. ಕರಾವಳಿ ಮತ್ತು ಘಟ್ಟದ ಮೇಲಿನ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕರಾವಳಿ ಭಾಗದಲ್ಲಿ ಬೆಳಗ್ಗಿನಿಂದ ಸುರಿಯುತ್ತಿದ್ದ ಮಳೆ ಮಧ್ಯಾಹ್ನ ವೇಳೆಗೆ ಬಿರುಸಾಗಿದೆ.

ಕಾರವಾರ, ಅಂಕೋಲಾದಲ್ಲಿ ಭಾರಿ ಮಳೆ ಸುರಿದಿದೆ. ಬೇಡ್ತಿ ನದಿ ಕಣಿವೆ ಪ್ರದೇಶವಾದ ಅಂಕೋಲಾದ ರಾಮನಗುಳಿ, ಸುಂಕಸಾಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತು ಅಂಕೋಲಾದ ಗಂಗಾವಳಿ ನದಿ ಪ್ರದೇಶದಲ್ಲಿ ಪ್ರವಾಹ ಭೀತಿ ಉಂಟಾಗಿದೆ.

ವಿದ್ಯಾರ್ಥಿಗಳಿಗೆ ತೊಂದರೆ:
ಅಂಕೋಲಾ ತಾಲೂಕಿನ ವಾಸರಕುದ್ರಿಗೆ ಗ್ರಾಮದಲ್ಲಿ ಬೆಳಗ್ಗಿನ ಜಾವ ರಸ್ತೆಗೆ ಅಡ್ಡಲಾಗಿ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾಗಬೇಕಾದ ಮಕ್ಕಳು ಶಿರಗುಂಜಿ ಮೂಲಕ ಬದಲಿ ಮಾರ್ಗದಲ್ಲಿ ಪರೀಕ್ಷಾ ಕೇಂದ್ರ ತಲುಪುವ ಅನಿವಾರ್ಯತೆ ಉಂಟಾಯಿತು.

ಘಟ್ಟದ ಮೇಲಿನ ತಾಲೂಕುಗಳಾದ ಯಲ್ಲಾಪುರ, ಮುಂಡಗೋಡ, ಹಳಿಯಾಳ, ದಾಂಡೇಲಿ,ಜೋಯಿಡಾದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆ ಸುರಿದಿದೆ.

ದಾಂಡೇಲಿಯಲ್ಲಿ ಮಳೆಯಿಂದಾಗಿ ನಗರದ ಪ್ರಮುಖ ಬೀದಿಗಳಲ್ಲಿ ನೀರು ತುಂಬಿಕೊಂಡಿದ್ದು ಜನ ಸಂಚಾರಕ್ಕೆ ತೊಂದರೆಯಾಗಿದೆ.

ಜಲಾಶಯಗಳು ಭರ್ತಿ:
ಜಿಲ್ಲೆಯ ಕದ್ರಾ ಮತ್ತು ಕೊಡಸಳ್ಳಿ ಜಲಾಶಯಗಳು ಗರಿಷ್ಠ ಮಟ್ಟ ತಲುಪುವ ಹಂತದಲ್ಲಿದೆ. 8 ಗೇಟ್ ಮೂಲಕ 42,175 ಕ್ಯೂಸೆಕ್, ಕೊಡಸಳ್ಳಿ ಜಲಾಶಯದ 4 ಗೇಟ್ ಮೂಲಕ 22,394 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಕದ್ರಾದ ಪ್ರಸಿದ್ಧ ಮಹಾಮಾಯಿ ದೇವಾಲಯದ ಆವರಣ ಮುಳುಗಡೆ ಆಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಬಿಟ್ಟರೆ ಸುತ್ತಮುತ್ತಲಿನ ಭಾಗಗಳಲ್ಲಿ ನೀರು ತುಂಬುವ ಆತಂಕ ಎದುರಾಗಿದೆ.

ಅಧಿಕಾರಿಗಳ ಮುಂಜಾಗ್ರತೆ:
ಚಂದ್ರಂಪಳ್ಳಿ ಯಲ್ಲಿ ಒಳ ಹರಿವು ಹೆಚ್ಚಳವಾಗಿರುವುದರಿಂದ ಜಲಾಶಯ ಯಾವುದೇ ಕ್ಷಣದಲ್ಲಿ ಭರ್ತಿಯಾಗುವ ಹಂತದಲ್ಲಿದೆ. ಗರಿಷ್ಠ ಮಟ್ಟದ ನಂತರ ಬಂದ ಒಳ ಹರಿವಿನ ನೀರನ್ನು ಆಣೆಕಟ್ಟೆ ಕೋಡಿ ಮುಖಾಂತರ ನದಿಗೆ ಹರಿಬಿಡಲಾಗುವುದು ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಬೆಣ್ಣೆತೋರಾ ಯೋಜನೆ ವಿಭಾಗ ನಂ.4ರ. (ಹೆಬ್ಬಾಳ) ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

ಮುಳುಗಿದ ರಸ್ತೆ,ಸೇತುವೆಗಳು:
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಮುಂಗಾರು ಅಬ್ಬರಿಸುತ್ತಿದ್ದು, ರಸ್ತೆ, ಸೇತುವೆಗಳು ಹಾನಿಗೀಡಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್‍ಆರ್‍ಪುರ ತಾಲೂಕುಗಳಲ್ಲಿ ಭಾರೀ ಮಳೆಯಾಗಿದ್ದು, ಪ್ರಮುಖ ನದಿಗಳಾದ ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ.

ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳ ಸೇತುವೆ ಮುಳುಗಡೆಯಾಗಿದ್ದು, ಸಂಚಾರ ಸ್ಥಗಿತಗೊಂಡಿದೆ. ಕಳಸದಿಂದ ಅಬ್ಬುಗುಡಿಗೆ ಹಾಗೂ ಕಲ್ಲುಗೋಡು ಗ್ರಾಮ ಸಂಪರ್ಕಿಸುವ ಕಿರು ಸೇತುವೆ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಹೊರನಾಡಿನ ಗೀಕ್ ತೋಟಕ್ಕೆ ಹೋಗುವ ರಸ್ತೆ ಕುಸಿದಿದ್ದು, ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ.

ಮೂಡಿಗೆರೆ ತಾಲೂಕು ಬಾಳೂರು ಹೋಬಳಿಯ ಮರ್ಕಲ್ ಬಸ್ ನಿಲ್ದಾಣದಿಂದ ಕಾಗಿನಕೊಂಡ ಗ್ರಾಮದ ವರೆಗಿನ ರಸ್ತೆ ಮಳೆಯಿಂದ ತೀವ್ರ ಹಾನಿಯಾಗಿದ್ದು ಗ್ರಾಮಸ್ಥರು ಪರದಾಡುವಂತಾಗಿದೆ. ಚಿಕ್ಕಮಗಳೂರು ತಾಲೂಕಿನ ಗಿರಿತಪ್ಪಲಲ್ಲೂ ಭಾರೀ ಮಳೆಯಾಗುತ್ತಿದೆ. ಕೆಮ್ಮಣ್ಣುಗುಂಡಿ ಭಾಗದಲ್ಲೂ ಧಾರಾಕಾರ ಮಳೆಸುರಿಯುತ್ತಿರುವ ಪರಿಣಾಮ ತರೀಕೆರೆ ತಾಲ್ಲೂಕು ಕಲ್ಲತ್ತಿಗಿರಿ ಜಲಪಾತವು ರುದ್ರರಮಣೀಯವಾಗಿ ಧುಮ್ಮಿಕ್ಕುತ್ತಿದ್ದು, ವೀರಭದ್ರೇಶ್ವರ ದೇವಸ್ಥಾನದ ರಸ್ತೆ ಬಂದ್ ಆಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ