ಬಿಜೆಪಿಯಲ್ಲೀಗ ಮುಖ್ಯಮಂತ್ರಿ ಬದಲಾವಣೆಯಾಗುತ್ತಿದೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಬಿಜೆಪಿಯವರು ದಲಿತರನ್ನು ಮುಖ್ಯಮಂತ್ರಿ ಮಾಡಿ ತೋರಿಸಲಿ: ಸಿದ್ದರಾಮಯ್ಯ ಸವಾಲು

ಮಂಗಳೂರು, ಜು.23- ಬಿಜೆಪಿಯಲ್ಲೀಗ ಮುಖ್ಯಮಂತ್ರಿ ಬದಲಾವಣೆಯಾಗುತ್ತಿದೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಬಿಜೆಪಿಯವರು ದಲಿತರನ್ನು ಮುಖ್ಯಮಂತ್ರಿ ಮಾಡಿ ತೋರಿಸಲಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹಲವು ತಿಂಗಳ ಹಿಂದೆಯೇ ಯಡಿಯೂರಪ್ಪ ಬದಲಾಗುತ್ತಾರೆ ಎಂದಿದ್ದೆ. ನನಗೆ ಹೈಕಮಾಂಡ್ ಮೂಲದ ಮಾಹಿತಿ ಇತ್ತು, ಆದರೆ ಯಾರು ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಮಾಹಿತಿ ಇಲ್ಲ ಎಂದರು.

ಈ ಮೊದಲು ನಳೀನ್ ಕುಮಾರ್ ಕಟೀಲ್ ನನಗೆ ಸವಾಲು ಹಾಕಿ, ಸಿದ್ದರಾಮಯ್ಯ ದಲಿತರನ್ನು ಮುಖ್ಯಮಂತ್ರಿ ಮಾಡಲಿ ಎಂದು ಹೇಳಿದ್ದರು, ಕಾಂಗ್ರೆಸ್‍ನಲ್ಲಿ ಬಹಳಷ್ಟು ಮಂದಿ ದಲಿತರು ಬೇರೆ ಬೇರೆ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳಾಗಿದ್ದಾರೆ. ಕರ್ನಾಟಕದಲ್ಲಿ ಈಗ ಬಿಜೆಪಿಯವರಿಗೆ ಅವಕಾಶ ಇದೆ. ಯಡಿಯೂರಪ್ಪ ಅವರನ್ನು ಹೇಗೂ ತೆಗೆಯುತ್ತಾರೆ. ಅವರ ನಂತರ ದಲಿತರನ್ನು ಮುಖ್ಯಮಂತ್ರಿ ಮಾಡಲಿ ಎಂದು ಸವಾಲು ಹಾಕಿದರು.

ದಲಿತರ ಬಗ್ಗೆ ನಳೀನ್ ಕುಮಾರ್ ಕಟೀಲ್ ಮತ್ತು ಬಿಜೆಪಿಯವರಿಗೆ ಪ್ರೀತಿ ಇಲ್ಲವೇ. ಕಾಂಗ್ರೆಸ್‍ನವರನ್ನು ಪ್ರಶ್ನಿಸಲು ಬರುವ ಅವರಿಗೆ ಸಾಮಾಜಿಕ ಬದ್ಧತೆ ಇದ್ದರೆ ಅವಕಾಶ ಇರುವ ಈಗ ದಲಿತರನ್ನು ಮುಖ್ಯಮಂತ್ರಿ ಮಾಡಿ ತಮ್ಮ ಬದ್ಧತೆ ತೋರಿಸಲಿ ಎಂದು ನಳೀನ್ ಕುಮಾರ್‍ಗೆ ಸವಾಲು ಹಾಕುವುದಾಗಿ ಹೇಳಿದರು.

ಬಿಜೆಪಿಯವರಿಗೆ ಜನಗಳ ಬಗ್ಗೆ ಕಾಳಜಿ ಇಲ್ಲ, ಹಿಂದೆಯೂ ಇರಲಿಲ್ಲ, ಈಗ ಬರೋಕೆ ಸಾಧ್ಯವಿಲ್ಲ. 2019ರಲ್ಲಿ ಬಂದ ಪ್ರವಾಹದ ಪರಿಹಾರವನ್ನೇ ಯಡಿಯೂರಪ್ಪ ಇನ್ನೂ ಕೊಟ್ಟಿಲ್ಲ. ಈಗ ಎಲ್ಲಾ ಕಡೆ ಮಳೆ ಬಂದು ಜನ ಕೊಚ್ಚಿ ಹೋಗಿದ್ದಾರೆ, ಮನೆಗಳು ಬಿದ್ದಿವೆ, ಈಗ ಸರ್ಕಾರ ಯುದ್ದೋಪಾದಿಯಲ್ಲಿ ಕೆಲಸ ಮಾಡುವ ಬದಲು ಮುಖ್ಯಮಂತ್ರಿ ಬದಲಾವಣೆಯ ರಾಜಕೀಯ ನಡೆಯುತ್ತಿದೆ. ಯಡಿಯೂರಪ್ಪರನ್ನು ಬದಲಾವಣೆ ಮಾಡುತ್ತಾರೆ. ಮುಂದೆ ಬರುವವರು ಕೂಡ ಭ್ರಷ್ಟರೆ ಆಗಿರುತ್ತಾರೆ.

ರಾಜ್ಯದಲ್ಲಿ ಯಾವುದೇ ಮಠಾಧೀಶರು ರಾಜಕಾರಣಕ್ಕೆ ಕೈ ಹಾಕಬಾರದು. ಇಲ್ಲಿ ಜನಾಭಿಪ್ರಾಯ ಬಹಳ ಮುಖ್ಯ, ಪಕ್ಷದ ಒಳಗಿನ ವಿಚಾರದಲ್ಲಿ ಯಾರೂ ಕೈ ಹಾಕಬಾರದು ಎಂದು ಸಲಹೆ ನೀಡಿದ್ದಾರೆ.

ಕಾಂಗ್ರೆಸ್ ಬಿಟ್ಟು ಹೋದವರನ್ನು ಮತ್ತೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ನನಗೇನು ಗೊತ್ತಿಲ್ಲ. ಅವರು ಬರುತ್ತಾರೋ ಇಲ್ಲವೋ ನನಗೆ ಮಾಹಿತಿ ಇಲ್ಲ.

ಸದನದಲ್ಲೇ ಅವರನ್ನ ವಾಪಾಸ್ ತೆಗೆದು ಕೊಳ್ಳುವುದಿಲ್ಲ ಎಂದಿದ್ದೆ. ಯಾವುದೇ ಕಾರಣಕ್ಕೂ ಅವರನ್ನು ವಾಪಾಸ್ ತೆಗೆದುಕೊಳ್ಳುವುದಿಲ್ಲ ಎಂಬುದಕ್ಕೆ ನಾನು ಬದ್ದವಾಗಿದ್ದೇನೆ ಎಂದರು. ತಾವು ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿಗೆ ಹೋಗಿದ್ದಾಗ ರಾಹುಲ್ ಗಾಂಧಿಯವರು ಕಾಂಗ್ರೆಸಿಗರೆಲ್ಲಾ ಒಟ್ಟಾಗಿ ಕೆಲಸ ಮಾಡಿ, ಭ್ರಷ್ಟ ಬಿಜೆಪಿ ಸರ್ಕಾರ ಬದಲಾಯಿಸಿ ಎಂದಿದ್ದಾರೆ. ಅದರಂತೆ ನಾವು ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ಹೋರಾಟ ಮಾಡುತ್ತೇವೆ ಎಂದ್ದರು.

ಪೇಗಾಸಸ್ ಪೋನ್ ಬೇಹುಗಾರಿಕೆ ಹಗರಣ ಬಿಜೆಪಿಗೆ ಹೊಸದಲ್ಲ. ಈ ಮೊದಲು ಬಿಜೆಪಿ ಇದನ್ನೇ ಮಾಡಿತ್ತು. 2019ರಲ್ಲಿ ನನ್ನು ಆಪ್ತ ಸಹಾಯಕ ವೆಂಕಟೇಶ್ ಅವರ ದೂರವಾಣಿ ಕದ್ದಾಲಿಕೆ ಮಾಡಲಾಗಿತ್ತು. ನಮ್ಮ ಪಕ್ಷದ ಡಾ.ಜಿ.ಪರಮೇಶ್ವರ್, ಜೆಡಿಎಸ್‍ನ ಎಚ್.ಡಿ.ಕುಮಾರ ಸ್ವಾಮಿ, ಸೇರಿದಂತೆ ಹಲವರ ಪೋನ್‍ಗಳನ್ನು ಕದ್ದಾಲಿಕೆ ಮಾಡಿದ್ದಾರೆ. ಕಾಂಗ್ರೆಸ್-ಜೆಡಿಸ್ ಸಮ್ಮಿಶ್ರ ಸರ್ಕಾರ ಕಿತ್ತು ಹಾಕಲು ಏನು ಬೇಕೋ ಅದೆನ್ನೆಲ್ಲಾ ಮಾಡಿದ್ದಾರೆ. ಈ ಹಗರಣವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು.

ಪೋನ್ ಕದ್ದಾಲಿಕೆ ಪ್ರಜಾಪ್ರಭುತ್ವದ ಕೊಲೆ, ಸುಪ್ರೀಂ ಕೋರ್ಟ್, ಹೈ ಕೋರ್ಟ್ ನ್ಯಾಯಾಧೀಶರ ಟೆಲಿಪೋನ್ ಕದ್ದಾಲಿಕೆಗಳಾಗಿವೆ. ಬಿಜೆಪಿಯವರಿಗೆ ಸರ್ಕಾರ ನಡೆಸುವ ಯೋಗ್ಯತೆ ಇಲ್ಲ, ನಾಲಾಯಕ್‍ಗಳು ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ