ಮಂಗಳೂರು, ಜು.23- ಒಳ್ಳೆಯ ಸರ್ಕಾರ ಕೊಡಲು ಆಗದೆ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಬಲ್ ಇಂಜಿನ್ ಸರ್ಕಾರ ಇಟ್ಟು ಕೊಂಡು ಒಳ್ಳೆಯ ಆಡಳಿತ ಕೊಡಲು ಎರಡು ವರ್ಷದಲ್ಲಿ ಆಗಲಿಲ್ಲ. ಆಡಳಿತ ಸರಿ ಇಲ್ಲ, ಗ್ರಾಮ ಪಂಚಾಯತಿಯಿಂದ ಹಿಡಿದು ವಿಧಾನಸೌಧದವರೆಗೆ ಅಧಿಕಾರಿಗಳು ಜನಪ್ರತಿನಿಧಿಗಳ ಮಾತು ಕೇಳುತ್ತಿಲ್ಲ. ಅಧಿಕಾರ ಬಿಟ್ಟು ಹೋಗುವಾಗ ತರಾತುರಿಯಲ್ಲಿ ಅನುದಾನ ಬಿಡುಗಡೆ ಮಾಡುತ್ತಿದ್ದಾರೆ. ಕಡತಗಳಿಗೆ ಸಹಿ ಹಾಕುತ್ತಿದ್ದಾರೆ. ನೀರಾವರಿ ಸೇರಿದಂತೆ ಬೇರೆ ಬೇರೆ ಇಲಾಖೆಗಳ ಕಡತಗಳು ಕ್ಲಿಯರ್ ಆಗುತ್ತಿವೆ. ಬಜೆಟ್ನಲ್ಲಿ ಎಷ್ಟು ದುಡ್ಡು ಇಟ್ಟಿದ್ದರು, ಎರಡು ವರ್ಷದಿಂದ ಎಷ್ಟು ಖರ್ಚಾಗಿದೆ, ಯಾವೆಲ್ಲಾ ಕಡತಗಳು ಕ್ಲಿಯರ್ ಆಗಿವೆ ಎಂಬ ಮಾಹಿತಿ ನಮ್ಮ ಬಳಿ ಇದೆ. ವಿಧಾನಸಭೆಯಲ್ಲಿ ದಾಖಲೆಗಳ ಸಹಿತ ಮಾತನಾಡುತ್ತೇನೆ ಎಂದಿದ್ದಾರೆ. ಇಷ್ಟು ದಿನ ದುಡ್ಡಿಲ್ಲ ಎಂದು ಯಾವ ಯೋಜನೆಗಳು ಕ್ಲಿಯರ್ ಆಗುತ್ತಿರಲಿಲ್ಲ. ಈಗ ದುಡ್ಡು ಎಲ್ಲಿಂದ ಬಂತು ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ಗೆ ಯಾರು ಬೇಕಾದರೂ ಬರಬಹುದು, ವಲಸಿಗರು ಸೇರಿದಂತೆ ಯಾರೇ ಆದರೂ ಮೊದಲು ಅರ್ಜಿ ಹಾಕಲಿ ಆಮೇಲೆ ನೋಡೋಣ. ಈಗ ಇದರ ಬಗ್ಗೆ ಅನಗತ್ಯವಾಗಿ ಮಾತನಾಡುವುದಿಲ್ಲ ಎಂದು ಹೇಳಿದರು.
ಜನ ಬಿಜೆಪಿಗೆ ಓಟ್ ಹಾಕಿಲ್ಲ. ಯಡಿಯೂರಪ್ಪನವರಿಗೆ ಮತ ಹಾಕಿದ್ದಾರೆ ಎಂದು ಮಠಾಧೀಶರು ಹೇಳುತ್ತಿದ್ದಾರೆ. ಹೀಗಾಗಿ ಮಠಾಧೀಶರ ನಡೆಯನ್ನು ನಾನು ಪ್ರಶ್ನಿಸಲು ಹೋಗುವುದಿಲ್ಲ ಎಂದಿದ್ದಾರೆ.