ನವದೆಹಲಿ, ಜು.15- ಟೆಸ್ಟ್ ಕ್ರಿಕೆಟ್ಗಾಗಿ ಇಂಗ್ಲೆಂಡ್ಗೆ ತೆರಳಿರುವ ಭಾರತ ತಂಡದ ಆಟಗಾರನೊಬ್ಬನಿಗೆ ಕೊರೊನಾ ಸೋಂಕು ತಗುಲಿದ್ದು, ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಮುಂದಿನ ಆಗಸ್ಟ್ 4ರಿಂದ ನಡೆಯಲಿರುವ 5 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಪಂದ್ಯಾವಳಿಗಾಗಿ ಈಗಾಗಲೇ 23 ಭಾರತೀಯ ಆಟಗಾರರು ಬ್ರಿಟನ್ನಲ್ಲಿದ್ದು, 20 ದಿನಗಳ ಕ್ವಾರಂಟೈನ್ ಅವಧಿ ಕೂಡ ಮುಗಿಯುತ್ತಿದೆ. ಆದರೆ, ಒಬ್ಬ ಆಟಗಾರನಿಗೆ ಕೊರೊನಾ ಸೋಂಕು ತಗುಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜೈಷಾ ತಿಳಿಸಿದ್ದಾರೆ.
ಸೋಂಕು ತಗುಲಿರುವ ಆಟಗಾರ ಯಾರು ಎಂಬುದರ ಬಗ್ಗೆ ತಿಳಿಸಿಲ್ಲ. ಆದರೆ, ಅವರನ್ನು ಹೊಟೇಲ್ ರೂಮ್ನಲ್ಲೇ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತರರ ಬಗ್ಗೆ ಯಾವುದೇ ಆತಂಕ ಬೇಡ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ತಂಡದ ಆಟಗಾರರು ಡರ್ಹಾಮ್ಗೆ ಹೋಗುತ್ತಿದ್ದು, ಸೋಂಕು ತಗುಲಿರುವ ಆಟಗಾರನನ್ನು ಇಲ್ಲೇ ಚಿಕಿತ್ಸೆಗೆ ಬಿಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡೆಲ್ಟಾ ಸೋಂಕು ತಗುಲಿರಬಹುದು ಎಂದು ಕೂಡ ಹೇಳಲಾಗುತ್ತಿದೆ. ಇತ್ತೀಚೆಗೆ ಕೆಲವು ಆಟಗಾರರು ಯೂರೋ ಫುಟ್ಬಾಲ್ ಚಾಂಪಿಯನ್ಶಿಪ್ ಪಂದ್ಯಾವಳಿ ವೀಕ್ಷಿಸಲು ತೆರಳಿದ್ದರೆ, ಇನ್ನೂ ಹಲವರು ವಿಂಬಲ್ಡನ್ ಟೆನ್ನಿಸ್ ಪಂದ್ಯಗಳನ್ನು ವೀಕ್ಷಿಸಲು ಹೋಗಿದ್ದರು. ಹೀಗಾಗಿ ಅವರಿಗೆ ಸೋಂಕು ತಗುಲಿರಬಹುದು ಎಂದು ಹೇಳಲಾಗಿದೆ.