ಐಸಿಸಿ ಅಂಡರ್-19 ವಿಶ್ವಕಪ್ ಗೆದ್ದ ಭಾರತ: ಹುಡುಗರ ಸಾಧನೆ ಹೆಮ್ಮೆ ತಂದಿದೆ ಎಂದ ದ್ರಾವಿಡ್

ಮೌಂಟ್‌ ಮೌಂಗನ್ಯುಯ್‌:ಫೆ-3: ನ್ಯೂಜಿಲೆಂಡ್‌ನ ಬೇ ಓವಲ್‌ನಲ್ಲಿ ನಡೆದ ಅಂಡರ್-19 ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎಂಟು ವಿಕೆಟುಗಳ ಅಂತರದಿಂದ ಸದೆಬಡಿರುವ ಭಾರತ, ದಾಖಲೆಯ ನಾಲ್ಕನೇ ಬಾರಿಗೆ ಕಿರಿಯರ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದಿದ್ದು, ನಮ್ಮ ಹುಡುಗರ ಸಾಧನೆಯನ್ನು ಹೆಮ್ಮೆಪಡುತ್ತೇನೆ ಎಂದು ಕೋಚ್ ರಾಹುಲ್ ದ್ರಾವಿಡ್ ಶ್ಲಾಘಿಸಿದ್ದಾರೆ.

ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್ ದ್ರಾವಿಡ್, ವಿಶ್ವಕಪ್ ಗೆಲುವಿನ ಸಂಪೂರ್ಣ ಶ್ರೇಯಸ್ಸು ನಮ್ಮ ಯುವ ತಂಡಕ್ಕೆ ಸೇರುತ್ತದೆ. ನಿಜವಾಗಿಯೂ ನಮ್ಮ ಹುಡುಗರ ಸಾಧನೆಯನ್ನು ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ.

ಕಳೆದ 14 ತಿಂಗಳು ನಾವು ಮಾಡಿದ ಪ್ರಯತ್ನವು ನಿಜಕ್ಕೂ ಸಂವೇದನಾತ್ಮಕವಾಗಿದೆ. ಹುಡುಗರ ಜತೆಗೆ ಸಹಾಯಕ ಸಿಬ್ಬಂದಿಗಳ ಪ್ರಯತ್ನವನ್ನು ವಿಶೇಷವಾಗಿ ಉಲ್ಲೇಖಿಸಬೇಕಾಗುತ್ತದೆ ಎಂದು ದ್ರಾವಿಡ್ ಹೇಳಿದರು.

ನಿಜಕ್ಕೂ ನಮ್ಮ ಹುಡುಗರು ಪ್ರಶಸ್ತಿಗೆ ಅರ್ಹವಾಗಿದ್ದಾರೆ. ಈ ಗೆಲುವಿನ ನೆನಪು ಬಹುಕಾಲ ಜತೆಗಿರಲಿದೆ. ಆದರೆ ಇದು ಅವರನ್ನು ನಿರೂಪಿಸುವ ನೆನಪು ಮಾತ್ರವಲ್ಲ. ಇನ್ನು ಮುಂದಕ್ಕೆ ವೃತ್ತಿ ಜೀವನದಲ್ಲಿ ಮತ್ತಷ್ಟು ಉತ್ತಮ ನೆನಪುಗಳು ಹರಸಿ ಬರಲಿದೆ ಎಂದರು.

ಈ ತಂಡಕ್ಕೆ ತರಬೇತು ನೀಡಲು ಹೆಚ್ಚಿನ ಗಮನ ಕೇಂದ್ರಿಕರಿಸಿದ್ದೆ. ಸಹಾಯಕ ಸಿಬ್ಬಂದಿಗಳ ಗುಣಮಟ್ಟವು ಕಳೆದ 14 ತಿಂಗಳಲ್ಲಿ ಅತ್ಯುತ್ತಮ ತಂಡವಾಗಿ ಮೂಡಿಬರಲು ನೆರವಾಗಿದೆ. ಅವರೆಲ್ಲರೂ ಮಾಡಿದ ಪರಿಶ್ರಮದ ಫಲ ಇದೀಗ ಸಂದಿದೆ ಎಂದು ಸೇರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ